ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಪಾಳ್ಯದ ರೈತ ಮಹಿಳೆ ಮಮತಾ ಎಸ್. ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಸಬಾ ಹೋಬಳಿಯ ಬೆಟ್ಟಹಳ್ಳಿಪಾಳ್ಯ ಗ್ರಾಮದ ಮಮತಾ ಅವರು 10 ಎಕರೆ ಜಮೀನಿನಲ್ಲಿ ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದಾರೆ. ರಾಗಿ, ತೊಗರಿ, ಮುಸುಕಿನ ಜೋಳ, ಅಲಸಂದೆ, ಹುರುಳಿ ಹಾಗೂ ಅವರೆ ಸೇರಿದಂತೆ ವಿವಿಧ ಧಾನ್ಯ ಬೆಳೆಗಳೊಂದಿಗೆ ಅಡಿಕೆ, ತೆಂಗು, ಸೀಬೆ, ಟೊಮ್ಯಾಟೊ, ಬೀನ್ಸ್, ಸೌತೆಕಾಯಿ, ಬದನೆ ಹಾಗೂ ಸೇವಂತಿಗೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಜಮೀನಿನ ಸುತ್ತ 500 ಸಿಲ್ವರ್ ಓಕ್, 10 ತೇಗ, 6 ಬೇವು ಹಾಗೂ 2 ಶ್ರೀಗಂಧದ ಮರಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿಯನ್ನೂ ಮೆರೆದಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡುವ ಅವರು, ಉಳುಮೆ, ಕಳೆ ತೆಗೆಯುವುದು ಹಾಗೂ ಒಕ್ಕಣೆಗೆ ಟ್ರ್ಯಾಕ್ಟರ್, ಟಿಲ್ಲರ್, ರೋಟವೇಟರ್ ಸೇರಿದಂತೆ ಆಧುನಿಕ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ.
ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿ ಮೂಲಕ ನೀರಿನ ಮಿತ ಬಳಕೆಗೆ ಒತ್ತು ನೀಡಿದ್ದಾರೆ. ಇದೇ ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ನಡೆಸುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ಬದು ನಿರ್ಮಾಣ ಹಾಗೂ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವ ಮೂಲಕ ಮಣ್ಣಿನ ಸವಕಳಿ ತಡೆದು ಫಲವತ್ತತೆ ಕಾಪಾಡಿಕೊಂಡಿದ್ದಾರೆ.
ಕೃಷಿಯೊಂದಿಗೆ ಪಶುಸಂಗೋಪನೆಗೂ ಆದ್ಯತೆ ನೀಡಿರುವ ಅವರು 3 ಎಚ್‌ಎಫ್ ಹಸುಗಳು, ಮೇಕೆ, ಕುರಿ, ಕೋಳಿ ಹಾಗೂ 30 ಯಾರ್ಕ್‌ಶೈರ್ ಹಂದಿಗಳನ್ನು ಸಾಕುತ್ತಿದ್ದಾರೆ. ಜಾನುವಾರುಗಳ ಮೇವಿಗಾಗಿ ಬಹುಕಟಾವು ನೇಪಿಯರ್, ಸಿಒಎಫ್‌ಎಸ್-31 ಹಾಗೂ ಆಫ್ರಿಕನ್ ಜೋಳ ಬೆಳೆದಿದ್ದಾರೆ.
ಸಾವಯವ ಕೃಷಿಗೆ ಒತ್ತು ನೀಡಿರುವ ಮಮತಾ ಅವರು ಕಾಂಪೋಸ್ಟ್ ಗೊಬ್ಬರ ತಯಾರಿಸುವುದರ ಜತೆಗೆ ಅಡಿಕೆ ತೋಟದಲ್ಲಿ ಹುರುಳಿ, ಅಲಸಂದೆ ಹಾಗೂ ಸೆಣಬನ್ನು ಹಸಿರೆಲೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಕೀಟ ಮತ್ತು ರೋಗ ನಿಯಂತ್ರಣಕ್ಕೆ ಅಂಟುಪಟ್ಟಿ, ಕಷಾಯ ಹಾಗೂ ಟ್ರೈಕೋಡರ್ಮಾ, ಸೂಡೊಮೊನಾಸ್‌ನಂತಹ ಜೈವಿಕ ಪೀಡೆನಾಶಕಗಳನ್ನು ಬಳಸುತ್ತಿದ್ದಾರೆ. ಅಡಿಕೆ ತೋಟದಲ್ಲಿ ಜೇನು ಸಾಕಾಣಿಕೆಯನ್ನೂ ಅಳವಡಿಸಿಕೊಂಡಿದ್ದಾರೆ.
ಕೊಯ್ಲಿನ ನಂತರ ಉತ್ಪನ್ನಗಳನ್ನು ಕ್ರೇಟ್‌ಗಳಲ್ಲಿ ಸಾಗಿಸಿ, ವಿಂಗಡಣೆ ಹಾಗೂ ಪ್ಯಾಕಿಂಗ್‌ಗೆ ಆದ್ಯತೆ ನೀಡುತ್ತಿದ್ದಾರೆ. ತಾಜಾ ಉತ್ಪನ್ನಗಳನ್ನು ನೇರವಾಗಿ ರಿಲಯನ್ಸ್ ಫ್ರೆಶ್ ಹಾಗೂ ಸಫಲ್ ಮಾರ್ಕೆಟ್‌ನಂತಹ ಮಾರುಕಟ್ಟೆಗಳಿಗೆ ತಲುಪಿಸಿ ಉತ್ತಮ ಬೆಲೆ ಪಡೆಯುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ವರ್ಷಪೂರ್ತಿ ಸುಮಾರು 20 ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡಿರುವ ಅವರು, ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಉತ್ತಮ ಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ತ್ರೀಶಕ್ತಿ ಸಂಘದ ಸದಸ್ಯೆಯಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಕೃಷಿ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ರೂಪಿಸಿಕೊಂಡಿರುವ ಮಮತಾ ಎಸ್. ಅವರು, ಆಧುನಿಕ ತಂತ್ರಜ್ಞಾನ ಮತ್ತು ಸಾವಯವ ಕೃಷಿಯ ಸಮನ್ವಯದ ಮೂಲಕ ಇಂದಿನ ಯುವಕರು ಹಾಗೂ ಮಹಿಳಾ ರೈತರಿಗೆ ಮಾದರಿಯಾಗಿದ್ದಾರೆ.
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…
ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…