ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು…..
ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು.
ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ವಿದೇಶಿ ಸಂಸ್ಕೃತಿಯ ಬಗ್ಗೆ ಒಂದಷ್ಟು ತಿರಸ್ಕಾರ ಮನೋಭಾವದ ವ್ಯಕ್ತಿ ಅವರು.
ಆ ಹೊತ್ತಿನಲ್ಲಿ ನಮ್ಮ ಮುಂದೆ ಇದ್ದ ಪತ್ರಿಕೆಯೊಂದರಲ್ಲಿ ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಒಂದು ವರದಿ ಇತ್ತು. ಅದರ ಬಗ್ಗೆ ತುಂಬಾ ವಿಷಾದ ವ್ಯಕ್ತಪಡಿಸಿ ಮಾತು ಆರಂಭವಾಗುತ್ತಿದ್ದಂತೆ ಅವರು ಒಂದು ಮಾತು ಹೇಳಿದರು….
ಅಮೆರಿಕಾದಲ್ಲಿ ಮಗುವೊಂದು ಅನಾಥವಾಗುವುದು ವೈಯಕ್ತಿಕವಾಗಿ ತುಂಬಾ ನೋವಿನ ವಿಷಯವಾದರು ಸಾಮಾಜಿಕವಾಗಿ ಆ ಮಗುವನ್ನು ಅದೃಷ್ಟಶಾಲಿ ಎಂದು ಪರಿಗಣಿಸಬಹುದು ಎಂದರು.
ಕುತೂಹಲದಿಂದ ಅದು ಹೇಗೆ ಎಂದು ಕೇಳಿದೆ…….
ಅವರ ವಿವರಣೆ……
ಒಂದು ವೇಳೆ ಒಂದು ಮಗು ಯಾವುದೇ ಕಾರಣದಿಂದ ತಂದೆ, ತಾಯಿ ಅಥವಾ ಪೋಷಕರನ್ನು ಕಳೆದುಕೊಂಡು ಅನಾಥವಾದರೆ ಇಡೀ ಅಮೆರಿಕಾದ ಸಮಾಜ ಮತ್ತು ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆ ಆ ಮಗುವಿಗೆ ಅನಾಥ ಪ್ರಜ್ಞೆ ಕಾಡದಂತೆ ಮಗುವನ್ನು ಬೆಳೆಸುವ ನೈತಿಕ ಜವಾಬ್ದಾರಿ ಹೊರುತ್ತದೆ. ಅನಾಥ ಮಗುವಿಗೆ ಎಲ್ಲಾ ರೀತಿಯ ಗುಣಮಟ್ಟದ ಸೌಕರ್ಯಗಳನ್ನು ಕೊಡುವುದಲ್ಲದೆ ಅದಕ್ಕೆ ವಿಶೇಷ ಗೌರವ ಆತಿಥ್ಯ ನೀಡಲಾಗುತ್ತದೆ. ವಿಷಯ ತಿಳಿದಿರುವ ಪ್ರತಿಯೊಬ್ಬರು ತಮ್ಮ ಕರ್ತವ್ಯ ಎಂಬಂತೆ ಅನುಕಂಪಕ್ಕೆ ಬದಲಾಗಿ ಆತ್ಮೀಯತೆ ತೋರುತ್ತಾರೆ. ಮಗುವಿಗೆ ಯಾವುದೇ ಕೊರತೆ ಕಾಡದಂತೆ ಉತ್ತಮ ಪ್ರಜೆಯಾಗಿ ಬೆಳೆಯಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಾರೆ. ಇದೇ ಅಲ್ಲವೇ ಮಾನವೀಯ ಮೌಲ್ಯಗಳ ನಿಜವಾದ ಸಮಾಜ….
ಭಾರತದಲ್ಲಿ ಈ ರೀತಿಯ ಒಂದು ಮಗು ಅನಾಥವಾದರೆ ಏನಾಗಬಹುದು ಎಂಬುದನ್ನು ದಯವಿಟ್ಟು ಮುಕ್ತ ಮನಸ್ಸಿನಿಂದ ನಿಮ್ಮ ಅನುಭವದ ಆಧಾರದ ಮೇಲೆ ಊಹಿಸಿ.
ನನ್ನ ಅನುಭವದ ಪ್ರಕಾರ,
ಆ ಮಗುವನ್ನು ಅತ್ಯಂತ ಹೀನಾಯವಾಗಿ ಸಂಬಂಧಿಕರು, ಪರಿಚಿತರು, ಅಧಿಕಾರಿಗಳು ನಡೆಸಿಕೊಳ್ಳುತ್ತಾರೆ. ಅದಕ್ಕೆ ಯಾರೂ ದಿಕ್ಕು ದೆಸೆ ಇಲ್ಲ ಎಂದು ತಿಳಿದರೆ ಆ ಮಗುವಿನ ಬಳಿ ಸಿಗರೇಟು, ಮದ್ಯಪಾನ ತರಿಸಿಕೊಳ್ಳುವುದು, ಕೆಲವು ಸಣ್ಣ ಪುಟ್ಟ ಅಪರಾಧ ಮಾಡಿಸುವುದು, ಲೈಂಗಿಕ ದುರುಪಯೋಗ, ಸ್ವಲ್ಪ ಹಣ ನೀಡಿ ಏನೋ ಮಹಾ ಉಪಕಾರ ಮಾಡಿದಂತೆ ಮಾತನಾಡುವುದು ಹೀಗೆ ಅದನ್ನು ತುಂಬಾ ಕೀಳಾಗಿ ಕಾಣುತ್ತಾರೆ. ಸರ್ಕಾರಿ ವ್ಯವಸ್ಥೆಯ ಬಗ್ಗೆ ಹೆಚ್ಚು ಹೇಳುವುದು ಬೇಡ. ಎಲ್ಲಾ ಇರುವವರಿಗೇ ಸಿಕ್ಕಾಪಟ್ಟೆ ತೊಂದರೆ ಕೊಡುವಾಗ, ಇನ್ನು ಅನಾಥ ಮಗುವಿಗೆ ದಿಕ್ಕು ತೋರುವುದು ಯಾರು…..
ಕೊನೆಗೆ ಇದು ಆ ಮಗುವಿನ ಕರ್ಮ ಎಂದು ಕರೆದು ಪಲಾಯನ ಸಿದ್ದಾಂತದ ಮೊರೆ ಹೋಗುವವರು ಹಲವರು.
ಇಲ್ಲಿ ಇದನ್ನು ಪ್ರಸ್ತಾಪಿಸಲು ಕಾರಣ, ಪಾಶ್ಚಾತ್ಯ ಸಂಸ್ಕೃತಿಯ ಅಮೆರಿಕ ದೇಶದ ಸಮಾಜ ಅನಾಥ ಮಗುವನ್ನು ಬೆಳೆಸುವ ಪರಿ, ಹಾಗೆಯೇ ಆಧ್ಯಾತ್ಮದ ತವರೂರು, ಧಾರ್ಮಿಕ ನಿಷ್ಠೆ, ಮಾನವೀಯ ಮೌಲ್ಯಗಳ ವಕ್ತಾರರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತೀಯ ಸಮಾಜದಲ್ಲಿ ಅನಾಥ ಮಗುವನ್ನು ಬೆಳೆಸುವ ರೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು.
ಅನಾಥ ಮಕ್ಕಳನ್ನು ಭಿಕ್ಷೆಗೆ ತಳ್ಳುವ, ಮಾರಿಕೊಳ್ಳುವ, ಅಪರಾಧಿಗಳನ್ನಾಗಿ ಮಾಡುವ, ದುಶ್ಚಟಗಳಿಗೆ ಉಪಯೋಗಿಸಿಕೊಳ್ಳುವ ಸಮಾಜ ನಮ್ಮದಾಗುವುದು ಬೇಡ. ಪ್ರಾಕೃತಿಕ ವಿಕೋಪಗಳು, ಕೊರೋನಾ ಮುಂತಾದ ಸಾಂಕ್ರಾಮಿಕ ರೋಗಗಳು, ಅಪಘಾತಗಳು ಇತ್ಯಾದಿ ಕಾರಣದಿಂದ ಬೃಹತ್ ಜನಸಂಖ್ಯೆಯ ಭಾರತದಲ್ಲಿ ಇತ್ತೀಚಿಗೆ ಅನಾಥರಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನು ಮುಂದೆ ಅಂತಹ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಬದುಕನ್ನು ರೂಪಿಸುವ ಕನಿಷ್ಠ ಜವಾಬ್ದಾರಿ ಸಮಾಜ ಮತ್ತು ಸರ್ಕಾರ ತೆಗೆದುಕೊಳ್ಳುಬೇಕಿದೆ. ಅದಕ್ಕೆ ಬೇಕಾದ ಕಾನೂನು ಇದೆ. ಆದರೆ ಅನುಷ್ಠಾನ ಮಾತ್ರ ಭ್ರಷ್ಟಗೊಂಡಿದೆ.
ನಾವುಗಳು ವೈಯಕ್ತಿಕ ನೆಲೆಯಲ್ಲಿ ನಮ್ಮ ಸುತ್ತಮುತ್ತಲಿನ ಈ ರೀತಿಯ ಮಕ್ಕಳ ಬಗ್ಗೆ ಇನ್ನು ಮುಂದೆ ಸ್ವಲ್ಪ ಹೆಚ್ಚಿನ ಕಾಳಜಿ ಮತ್ತು ಆಸಕ್ತಿ ವಹಿಸೋಣ. ಅನಾಥ ಮಗುವಿಗೆ ಅನಾಥ ಪ್ರಜ್ಞೆ ಕಾಡದಂತೆ ಕನಿಷ್ಠ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಂದು ಸಣ್ಣ ಜವಾಬ್ದಾರಿ ನಿರ್ವಹಿಸೋಣ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…