Categories: ಲೇಖನ

ಅಡುಗೆ ನಂಜಮ್ಮನ್ನೊಂದಿಗೆ ನಾವು….. ಆಕೆ ನಮ್ಮ ಸಹೋದರಿ….

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ…….

ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ……..

ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ…..

ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ ದೃಢಪಡಿಸಬಹುದು.

ಕೇವಲ ಚಾಮರಾಜನಗರ ಮಾತ್ರವಲ್ಲ ಈಗಲೂ ಯಾವುದೇ ಹೋಟೆಲುಗಳ ಮುಂದೆ ನಮ್ಮಲ್ಲಿ ಪರಿಶಿಷ್ಟ ಜಾತಿಯವರು ಅಡುಗೆ ಕೆಲಸ ಮಾಡುತ್ತಾರೆ ಎಂದು ಫಲಕ ಹಾಕಿದರೆ, ಯಾವುದೇ ಮದುವೆ ಮನೆಯಲ್ಲಿ ನಮ್ಮಲ್ಲಿ ಪರಿಶಿಷ್ಟ ಜಾತಿಯ ಬಾಣಸಿಗರು ಶುಚಿಯಾದ, ರುಚಿಯಾದ ಅಡುಗೆ ಮಾಡುತ್ತಾರೆ ಎಂದು ಫಲಕ ಹಾಕಿದರೆ, ಆ ಕಾರ್ಯಕ್ರಮದಲ್ಲಿ ಅಥವಾ ಹೋಟೆಲಿನಲ್ಲಿ ಊಟ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತದೆ. ಇದಕ್ಕಿಂತ ಜಾತಿ ವ್ಯವಸ್ಥೆಗೆ ಸಾಕ್ಷಿಗಳು ಬೇಕೆ.

ಯುದ್ಧವಾದಾಗ ನಾವೆಲ್ಲ ಒಂದು ಎನ್ನುವ ಭಾರತೀಯತೆ, ಈಗಿನ ಶಾಂತಿಯ ಸಮಯದಲ್ಲಿ ಯಾಕಿಲ್ಲ, ಚಾಮರಾಜನಗರದ ನಂಜಮ್ಮನ ಅಡುಗೆ ಊಟ ಮಾಡದ ಮಕ್ಕಳು, ಅದಕ್ಕೆ ಅವಕಾಶ ಕೊಡದ ಪೋಷಕರು ನಂಜಮ್ಮನಿಂದ ಯಾವ ರೀತಿಯ ದೇಶನಿಷ್ಠೆ, ಧರ್ಮ ನಿಷ್ಠೆ ನಿರೀಕ್ಷಿಸುತ್ತಾರೆ. ಆ ದೃಶ್ಯಗಳನ್ನು ಕಣ್ಣಾರೆ ಕಾಣುವ ನಮ್ಮಂತಹವರಿಂದ ಸಹ ಯಾವ ನಿಷ್ಠೆ ಬಯಸುತ್ತಾರೆ.

ಕೆಲವರಿಗೆ ಜಾತಿ ಎಂಬುದು ಸಮಸ್ಯೆ ಅಲ್ಲದೇ ಇರಬಹುದು
ಕೆಲವರಿಗೆ ಅಸ್ಪೃಶ್ಯತೆ ಒಂದು ವಿಷಯವೇ ಅಲ್ಲದಿರಬಹುದು. ಆದರೆ ಅನುಭವಿಸುವ ಕೋಟ್ಯಂತರ ಜನರಿಗೆ ಅದರ ನೋವು ಸಾಯುವವರೆಗೂ ಕಾಡುತ್ತಿರುತ್ತದೆ ಎಂಬುದನ್ನು ಸೂಕ್ಷ್ಮ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.

ಕೋಲಾರದ ಅರಿವು ಶಿವಪ್ಪ ಅವರು ಸುಮಾರು 10 ವರ್ಷಗಳಿಂದ ನಿರಂತರವಾಗಿ ಅಸ್ಪೃಶ್ಯತೆ ಮುಕ್ತ ಮನ, ಅಸ್ಪೃಶ್ಯತೆ ಮುಕ್ತ ಮನೆ, ಅಸ್ಪೃಶ್ಯತೆ ಮುಕ್ತ ಊರು ಮಾಡಬೇಕೆಂದು ನಿರಂತರವಾಗಿ ಸಮತೆಯ ಟೀ, ಸಹ ಭೋಜನ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳೊಂದಿಗೆ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ನಾವು ಕೂಡ ಗ್ರಾಮೀಣ ಭಾಗದ ಜಾತಿ ವ್ಯವಸ್ಥೆಯ ಆಳ ಅಗಲಗಳನ್ನು ಕಣ್ಣಾರೆ ಕಂಡಿದ್ದೇವೆ.

ಗಗನಯಾನಿ ಶುಭಾಂಶು ಶುಕ್ಲಾ ಅವರ ಅದ್ಭುತ ಸಾಧನೆ ಬಹಳಷ್ಟು ಪ್ರಚಾರ ಪಡೆಯಲಿ, ಅದು ಒಂದು ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ., ಹಾಗೆಯೇ ಅದರ ಜೊತೆಜೊತೆಯಾಗಿಯೇ ಈ ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಎಂಬ ಅಸಹ್ಯಕರ ವಿದ್ಯುಮಾನದ ಬಗ್ಗೆಯೂ ಅಷ್ಟೇ ಪ್ರಚಾರ ಸಿಗಬೇಕು. ಜಾತಿವಾದಿ ಹೃದಯಗಳಿಗೆ ಇದು ತಟ್ಟಬೇಕು, ಅವರಲ್ಲಿ ಕನಿಷ್ಠ ಮಾನವ ಪ್ರಜ್ಞೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಸಹ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕು.

” ನೊಂದವರ ನೋವು , ನೋಯದವರೆತ್ತ ಬಲ್ಲರೋ ” ಹಾಗೆಯೇ ಜಾತಿಯಿಂದ, ಜಾತಿಯ ಕಾರಣಕ್ಕೆ ನೊಂದವರು, ಅವಕಾಶ ವಂಚಿತರು, ಶೋಷಿತರು, ಅವಮಾನಿತರು ಇರುವವರೆಗೂ ಭಾರತೀಯತೆ ಎಂಬುದು ಕೇವಲ ಒಂದು ಘೋಷಣೆ ಯಾಗುತ್ತದೆ. ಇಡೀ ದೇಶದ ಐಕ್ಯತೆ ಕೇವಲ ಬಾಯಿ ಮಾತಿನ ಭ್ರಮೆಯಾಗುತ್ತದೆ.

ನಾವು ಎಲ್ಲ ಸಂದರ್ಭಗಳಲ್ಲೂ ಮನುಷ್ಯರೆಲ್ಲಾ ಒಂದೇ, ಭಾರತೀಯರೆಲ್ಲಾ ಒಂದೇ ಎನ್ನುವ ನೈಜ ನಡವಳಿಕೆ ನಮ್ಮೊಳಗೆ ಉಂಟಾಗದಿದ್ದರೆ ದೇಶದ ಸಮಗ್ರ ಅಭಿವೃದ್ಧಿ ಎಂದೆಂದಿಗೂ ಸಾಧ್ಯವಿಲ್ಲ.
ನಾವು ಕೇವಲ ಮೇಲ್ಮುಖವಾಗಿ ನೋಡುತ್ತಾ ಚಲಿಸುತ್ತಿದ್ದರೆ ಎಡವಿ ಬೀಳುವುದು ಖಂಡಿತ. ಆದ್ದರಿಂದ ಸಾಧನೆಗಳು ತುಂಬಾ ಅವಶ್ಯಕ ಹಾಗೆಯೇ ಈ ರೀತಿಯ ಅಸಹ್ಯಕರ ನಡವಳಿಕೆಗಳನ್ನು ಅಷ್ಟೇ ತೀವ್ರವಾಗಿ ಖಂಡಿಸಿ ಜಾಗೃತಿ ಮೂಡಿಸುತ್ತಲೇ ಇರಬೇಕು.

ಪರಿಶಿಷ್ಟ ಜಾತಿಯ ಹೆಣ್ಣೊಬ್ಬರು ಮಾಡುವ ಅಡುಗೆಯನ್ನು ತನ್ನ ಸಹಪಾಠಿಗಳೇ, ಸಹಜೀವಿಗಳೇ ಜಾತಿಯ ಕಾರಣಕ್ಕೆ ತಿರಸ್ಕರಿಸಿದರೆ ಈ ಸಮಾಜದ ಇನ್ನೂ ಅನಾಗರಿಕವಾಗಿಯೇ ಇದೆ. ಎಷ್ಟೇ ಆಧುನಿಕತೆ, ತಂತ್ರಜ್ಞಾನ ಬೆಳೆದರೂ ಜಾತಿಯೆಂಬ ಪೆಡಂಭೂತ ಈ ದೇಶದಿಂದ ತೊಲಗುವವರೆಗೂ ಈ ದೇಶಕ್ಕೆ ವಿಶ್ವಗುರುವಿನ ಪಟ್ಟ ಸಿಗಲು ಸಾಧ್ಯವೇ ಇಲ್ಲ. ಮನುಷ್ಯರೆಲ್ಲರೂ ಒಂದೇ, ಭಾರತೀಯರು ಒಂದೇ ಎನ್ನುವ ಸಮ ಸಮಾಜ ನಿರ್ಮಾಣವಾಗುವ ಬಹಳ ದೂರ ಚಲಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ……..

ಅಡುಗೆ ನಂಜಮ್ಮನ್ನೊಂದಿಗೆ ನಾವು.
ಆಕೆ ನಮ್ಮ ಸಹೋದರಿ. ಎಲ್ಲಾ ನೊಂದವರೊಂದಿಗೆ ಸದಾ ಸಾವು……

ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

40 minutes ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

5 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

11 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

1 day ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

1 day ago