ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ ಪರಿಣಾಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. 2011ರ ಜನಗಣತಿ ವೇಳೆಯಲ್ಲಿ ಶೇ.77.93ರಷ್ಟಿದ್ದ ಜಿಲ್ಲೆಯ ಸಾಕ್ಷರತಾ ಪ್ರಮಾಣ 2026ರ ವೇಳೆಗೆ ಶೇ.94.35ಕ್ಕೆ ಏರಿಕೆಯಾಗಿದೆ.
ಕಳೆದ ಒಂದೂವರೆ ದಶಕದಲ್ಲಿ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ಶೇ.95ರ ಗಡಿ ತಲುಪಿದರೆ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸುವ ಅವಕಾಶವಿದೆ. ಹೀಗಾಗಿ ಉಳಿದಿರುವ ಶೇ.5ರಷ್ಟು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವತ್ತ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಗಮನಹರಿಸಿವೆ.
ಪುರುಷರಿಗಿಂತ ಮಹಿಳೆಯರೇ ಒಂದು ಹೆಜ್ಜೆ ಮುಂದೆ
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇ.84.82 ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.70.63ರಷ್ಟಿತ್ತು. ಒಟ್ಟು ಸಾಕ್ಷರತಾ ಪ್ರಮಾಣ ಶೇ.77.93ರಷ್ಟಿತ್ತು.
ಆದರೆ 2026ರ ವೇಳೆಗೆ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಿದೆ. ಪುರುಷರ ಸಾಕ್ಷರತೆ ಶೇ.94.04ಕ್ಕೆ ಏರಿಕೆಯಾಗಿದ್ದರೆ, ಮಹಿಳೆಯರ ಸಾಕ್ಷರತೆ ಶೇ.94.67ಕ್ಕೆ ತಲುಪಿದೆ. ಜಿಲ್ಲೆಯ ಒಟ್ಟು ಸಾಕ್ಷರತಾ ಪ್ರಮಾಣ ಶೇ.94.35ರಷ್ಟಾಗಿದೆ.
ವಿಶೇಷವೆಂದರೆ, ಪ್ರಸಕ್ತ ಅಂಕಿ-ಅಂಶಗಳಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಪುರುಷರಿಗಿಂತಲೂ ಹೆಚ್ಚಾಗಿದೆ. 2011ರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆಯ ನಡುವೆ ಸುಮಾರು 14 ಶೇಕಡಾ ಅಂತರವಿದ್ದರೆ, 2026ರ ವೇಳೆಗೆ ಈ ಅಂತರ ಸಂಪೂರ್ಣವಾಗಿ ಬದಲಾಗಿದ್ದು, ಮಹಿಳೆಯರು ಸಾಕ್ಷರತೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸಾಕ್ಷರತೆಯ ಬೆಳವಣಿಗೆ ಹೀಗಿದೆ
ವರ್ಷ| ಪುರುಷರು| ಮಹಿಳೆಯರು| ಒಟ್ಟು
2011| ಶೇ.84.82| ಶೇ.70.63| ಶೇ.77.93
2026| ಶೇ.94.04| ಶೇ.94.67| ಶೇ.94.35
ಅಂದರೆ 2011ರಿಂದ 2026ರ ಅವಧಿಯಲ್ಲಿ ಜಿಲ್ಲೆಯ ಒಟ್ಟು ಸಾಕ್ಷರತಾ ಪ್ರಮಾಣ ಶೇ.16.42ರಷ್ಟು ಏರಿಕೆಯಾಗಿದೆ.
107 ಗ್ರಾಪಂಗಳ ಪೈಕಿ 64 ಗ್ರಾಪಂಗಳು ಸಾಕ್ಷರತಾ ಗುರಿ ಸಾಧನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 107 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ ಈಗಾಗಲೇ 64 ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಲಾಗಿದೆ. ಉಳಿದ ಗ್ರಾಮ ಪಂಚಾಯಿತಿಗಳನ್ನೂ ಸಂಪೂರ್ಣ ಸಾಕ್ಷರತಾ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದಕ್ಕಾಗಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ವಿವಿಧ ಜಾಗೃತಿ ಹಾಗೂ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅನಕ್ಷರಸ್ಥರ ಸಮೀಕ್ಷೆ; ‘ಉಲ್ಲಾಸ್’ನಲ್ಲಿ ನೋಂದಣಿ
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಸಾಕ್ಷರತಾ ಸಪ್ತಾಹ ಆಯೋಜಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ವಾರ್ತಾ ಇಲಾಖೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವಜನ ಹಾಗೂ ಕ್ರೀಡೆ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಲಿವೆ.
ಗ್ರಾಮ ಮಟ್ಟದಲ್ಲಿ ಶಿಕ್ಷಕರು ಅನಕ್ಷರಸ್ಥರನ್ನು ಗುರುತಿಸಲು ಸಮೀಕ್ಷೆ ನಡೆಸಲಿದ್ದು, ಗುರುತಿಸಲಾದವರ ವಿವರಗಳನ್ನು ‘ಉಲ್ಲಾಸ್’ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುತ್ತದೆ. ಬಳಿಕ ಅವರಿಗೆ ವಯಸ್ಕರ ಶಿಕ್ಷಣದ ಮೂಲಕ ಓದು-ಬರಹ ಕಲಿಸುವ ಕಾರ್ಯ ನಡೆಯಲಿದೆ.
ಬಿಇಒ, ಡಿಡಿಪಿಐ, ಡಯಟ್ ಪ್ರಾಂಶುಪಾಲರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಗಾರಗಳನ್ನೂ ಆಯೋಜಿಸಲಾಗುತ್ತಿದೆ.
ವಲಸೆ ಕಾರ್ಮಿಕರೇ ದೊಡ್ಡ ಸವಾಲು
ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಉದ್ಯೋಗ ಅರಸಿ ಬರುವ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಇವರಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಸಾಕ್ಷರರನ್ನಾಗಿ ಮಾಡುವಷ್ಟರಲ್ಲಿ ಕೆಲವರು ಬೇರೆಡೆಗೆ ವಲಸೆ ಹೋಗುತ್ತಾರೆ. ಅವರ ಜಾಗಕ್ಕೆ ಮತ್ತೆ ಹೊಸ ಕಾರ್ಮಿಕರು ಆಗಮಿಸುತ್ತಾರೆ.
ಹೀಗಾಗಿ ಉಳಿದಿರುವ ಶೇ.5ರಷ್ಟು ಸಾಕ್ಷರತಾ ಕೊರತೆಯನ್ನು ನೀಗಿಸುವಲ್ಲಿ ವಲಸೆ ಕಾರ್ಮಿಕರೇ ಪ್ರಮುಖ ಸವಾಲಾಗಿದ್ದಾರೆ. ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯ ನಡುವೆಯೂ ಎಲ್ಲರನ್ನೂ ಸಾಕ್ಷರರನ್ನಾಗಿಸುವ ಪ್ರಯತ್ನ ಮುಂದುವರಿದಿದೆ.
ಅಕ್ಷರದ ಮಹತ್ವ ಸಾರಲು ಹಲವು ಕಾರ್ಯಕ್ರಮ
ಸಾಕ್ಷರತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
* ಬೀದಿ ನಾಟಕಗಳ ಮೂಲಕ ಸಾಕ್ಷರತೆ ಕುರಿತು ಜಾಗೃತಿ
* ಸಾಮಾಜಿಕ ಜಾಲತಾಣಗಳಲ್ಲಿ ಕಿರುಚಿತ್ರಗಳ ಮೂಲಕ ಅರಿವು
* ರ‍್ಯಾಲಿಗಳ ಮೂಲಕ ಅಕ್ಷರ ಜ್ಞಾನದ ಮಹತ್ವದ ಪ್ರಚಾರ
* ಡಿಡಿಪಿಐ, ಬಿಇಒಗಳ ನೇತೃತ್ವದಲ್ಲಿ ಕಾರ್ಯಾಗಾರಗಳು
* ಗ್ರಾಮ ಮಟ್ಟದಲ್ಲಿ ಅನಕ್ಷರಸ್ಥರ ಗುರುತಿಸುವಿಕೆ ಮತ್ತು ವಯಸ್ಕರ ಶಿಕ್ಷಣ
‘ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗುವುದು ದೂರವಿಲ್ಲ’
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾಕ್ಷರತಾ ಪ್ರಮಾಣ ಏರಿಕೆಯಾಗುತ್ತಿದೆ. ವಯಸ್ಕರ ಶಿಕ್ಷಣದ ಮೂಲಕ ಜನರನ್ನು ತಲುಪುವ ಕಾರ್ಯ ನಡೆಯುತ್ತಿದೆ. 64 ಗ್ರಾಮ ಪಂಚಾಯಿತಿಗಳು ಈಗಾಗಲೇ ಸಂಪೂರ್ಣ ಸಾಕ್ಷರತಾ ಗುರಿ ಸಾಧಿಸಿವೆ. ಉಳಿದ ಪ್ರದೇಶಗಳಲ್ಲಿಯೂ ಸಾಕ್ಷರತಾ ಪ್ರಮಾಣ ಹೆಚ್ಚಿಸುವ ಮೂಲಕ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರವಿಕುಮಾರ್ ಜಿ.ಪಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…
ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…