Categories: ಲೇಖನ

ಅಕ್ರಮ ವಲಸೆ ತಪ್ಪು…. ದಯವಿಟ್ಟು ಸಕ್ರಮ ಬದುಕು ನಮ್ಮದಾಗಲಿ…..

ಯಾವುದು ನ್ಯಾಯ……

ಅಕ್ರಮ ವಲಸಿಗರು,
ಬುಲ್ಡೋಜರ್ ಸಂಸ್ಕೃತಿ,
ಭ್ರಷ್ಟ ಆಡಳಿತ ವ್ಯವಸ್ಥೆ,
ಕೆಟ್ಟ ರಾಜಕೀಯ,
ತಲೆಬುಡವಿಲ್ಲದ ಗಾಳಿ ಸುದ್ದಿಗಳು,
ವಿವೇಚನೆಯಿಲ್ಲದ ಮಾಧ್ಯಮ ಚರ್ಚೆಗಳು,

ಬೆಂಗಳೂರಿನ ಕೋಗಿಲು ಬಳಿಯ ಕೆಲವು ಅಕ್ರಮ ಮನೆಗಳನ್ನು ಹೊಡೆದುರುಳಿಸಿದ ಘಟನೆ ಕರ್ನಾಟಕದಲ್ಲಿ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಒಡೆದ ಕೆಲವೇ ದಿನಗಳಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವ, ಹೊಸ ಮನೆಯ ಸೌಕರ್ಯ ಒದಗಿಸುವ ಭರವಸೆ ಸರ್ಕಾರ ನೀಡಿದೆ.

ಆ ಪುನರ್ವಸತಿ ಬೇಡವೆಂದೋ, ಅಲ್ಲಿನ ನಿವಾಸಿಗಳು ಬಾಂಗ್ಲಾದೇಶದ ಅಕ್ರಮ ವಲಸಿಗರೆಂದೋ ಅಥವಾ ಅದೇ ರೀತಿ ರಾಜ್ಯದ ಎಲ್ಲರಿಗೂ ನ್ಯಾಯ ಕೊಡಿ ಎಂದೋ ವಿರೋಧ ಪಕ್ಷಗಳು ಹೇಳಿಕೆ ನೀಡುತ್ತಿವೆ. ಅಲ್ಲಿದ್ದವರು ಯಾರು ಎಂಬ ಪ್ರಶ್ನೆಯೇ ಮುಖ್ಯವಾಗಿ ವಾದ ವಿವಾದಗಳು ನಡೆಯುತ್ತಿವೆ. ಅಲ್ಲಿದ್ದವರು ಹಿಂದುಗಳೋ, ಮುಸ್ಲಿಮರೋ, ಅನ್ಯ ರಾಜ್ಯದವರೋ, ಬೇರೆ ದೇಶದವರೋ ಅಥವಾ ಅಕ್ರಮ ವಲಸಿಗರೋ ಅಥವಾ ಅಸಲಿಗೆ ಅವರು ಮನುಷ್ಯರೋ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಲಾಗದ ರೀತಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಮಾನವೀಯತೆ ಮರೆಯಾಗಿದೆ. ಮನಸ್ಸುಗಳು ಒಡೆದು ಹೋಗಿವೆ. ಎಲ್ಲವೂ ಹುಚ್ಚರ ಸಂತೆಯಂತೆ ಕಾಣುತ್ತಿದೆ.

ಆಡಳಿತ ವ್ಯವಸ್ಥೆ ಕುಸಿದು ಬಿದ್ದಾಗ ಈ ರೀತಿಯ ಅರಾಜಕತೆಯ ವಾತಾವರಣ ಸೃಷ್ಟಿಯಾಗುತ್ತದೆ. ರಾಜಧಾನಿಯ ಹತ್ತಿರದಲ್ಲೇ ಒಂದು ಸರ್ಕಾರಿ ಜಾಗದಲ್ಲಿ ಯಾರೋ ಒಬ್ಬ ಹಣ ಪಡೆದು, ಇನ್ಯಾರಿಗೋ ಜಾಗ ಕೊಡುತ್ತಾನೆ, ವಿದ್ಯುತ್, ನೀರಿನ ವ್ಯವಸ್ಥೆ ಮಾಡುತ್ತಾರೆ. ಬದುಕು ಸಾಗುತ್ತಿರುತ್ತದೆ. ಮುಂದೊಂದು ದಿನ ಮತ್ಯಾರೋ ಅದರ ವಿರುದ್ಧ ಧ್ವನಿ ಎತ್ತುತ್ತಾರೆ, ಮಗದೊಬ್ಬನ್ಯಾರೋ ಅಧಿಕಾರಿ ಅಥವಾ ನ್ಯಾಯಾಲಯ ಅದನ್ನು ಹೊಡೆದುರುಳಿಸಲು ಹೇಳುತ್ತದೆ. ಆಗ ಇದ್ದಕ್ಕಿದ್ದಂತೆ ಇನ್ಯಾರೋ ಅವರಿಗೆ ಆದ ಅನ್ಯಾಯವನ್ನು ಕುರಿತು ಮಾತನಾಡುತ್ತಾರೆ. ಮತ್ತೆ ಸರ್ಕಾರ ಅವರಿಗೆ ಇನ್ನೆಲ್ಲೋ ಪುನರ್ವಸತಿ ಕಲ್ಪಿಸುತ್ತದೆ.

ಹೀಗೆ ಘಟನೆಗಳ ಸರಪಳಿ ನಿರಂತರವಾಗಿ ನಡೆಯುತ್ತಿದೆ. ಆದರೆ ಪ್ರಾಮಾಣಿಕ, ಕಾನೂನಾತ್ಮಕ, ದಕ್ಷ ಮತ್ತು ಮಾನವೀಯ ಆಡಳಿತದ ವಾಸನೆಯೂ ಇಲ್ಲಿ ಇಲ್ಲ. ಎಲ್ಲವೂ ಹೇಗೋ ಹಾಗೆ ಉಡಾಫೆಯಿಂದ ನಡೆಯುತ್ತದೆ. ಇದರ ಬಗ್ಗೆ ನಾವೂ ಸಹ ಖಚಿತ ನಿಲುವನ್ನು ವ್ಯಕ್ತಪಡಿಸುವುದು ಸಾಧ್ಯವಾಗುವುದಿಲ್ಲ

ಏಕೆಂದರೆ ನಾವು ಸಾಮಾನ್ಯ ಜನ. ನಮಗೆ ಸರಿ ತಪ್ಪುಗಳ ಅರಿವಿರುತ್ತದೆ ಮತ್ತು ಸಹಜವಾಗಿ ಕೆಲವು ಅನುಕೂಲಗಳೊಂದಿಗೆ ಬದುಕುತ್ತಿದ್ದೇವೆ. ಆದರೆ ಜೀವನ ಅನಿವಾರ್ಯವಾಗುವ ಕಡುಬಡವರು ಅಥವಾ ಅತ್ಯಂತ ಕಡು ಭ್ರಷ್ಟರು ಅಥವಾ ಕಾನೂನು ದ್ರೋಹಿಗಳು ಮತ್ತು ಯಾವುದೋ ಹಿತಾಸಕ್ತಿಯಿಂದ ಏನೇನು ಕೆಟ್ಟ ಕೆಲಸಗಳನ್ನು ಮಾಡುತ್ತಾರೋ ನಮಗೆ ಅರಿವಾಗುವುದಿಲ್ಲ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಪೊಲೀಸ್ ವ್ಯವಸ್ಥೆಯೂ ಕೆಲವೊಮ್ಮೆ ನಿರ್ಲಕ್ಷ ತೋರಿಸುತ್ತದೆ.

ಇಂತಹ ಸಂದರ್ಭದಲ್ಲಿ ಒಂದು ಕಡೆ ಕಾನೂನು, ಇನ್ನೊಂದು ಕಡೆ ಜನರ ಭದ್ರತೆ ಮತ್ತು ರಕ್ಷಣೆ, ಮತ್ತೊಂದು ಕಡೆ ಮಾನವೀಯ ಮೌಲ್ಯಗಳು ಇವುಗಳ ನಡುವೆ ವಿಷಯವೇ ಸ್ಪಷ್ಟವಾಗದೆ ಯಾವುದೋ ಒಂದು ಅಭಿಪ್ರಾಯ ವ್ಯಕ್ತಪಡಿಸುವುದು ಅಷ್ಟು ಸೂಕ್ತವಲ್ಲ.
ಏಕೆಂದರೆ…….

ಈ ಭೂಮಿಗೆ ಎಲ್ಲರೂ ವಲಸಿಗರೇ…….

ನಿಜ, ಅಕ್ರಮ ಎಂಬ ಪದವೇ ಬಹುತೇಕ ಒಂದು ಅಪರಾಧ ಅಥವಾ ಮಾಡಬಾರದ ಕೆಲಸ ಅಥವಾ ಕಾನೂನಿನ ಉಲ್ಲಂಘನೆ ಅಥವಾ ಶಿಕ್ಷೆಗೆ ಗುರಿಯಾಗಬಹುದಾದ ತಪ್ಪು ಅಥವಾ ಸಕ್ರಮವಲ್ಲದ್ದು‌. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಕ್ರಮ ವಲಸೆಗಳಿಗೆ ನಾನಾ ಕಾರಣಗಳಿವೆ ಮತ್ತು ನಾನಾ ಉದ್ದೇಶಗಳಿವೆ, ವಿವಿಧ ಮುಖಗಳೂ ಇದೆ. ಅದನ್ನು ಬಹು ಆಯಾಮದಲ್ಲಿ ನೋಡಬೇಕಾಗುತ್ತದೆ.

ಬಹುತೇಕ ಎಲ್ಲಾ ಜೀವರಾಶಿಗಳು ಸೃಷ್ಟಿಯ ಮೂಲದಿಂದಲೂ ತಮಗೆ ಅನುಕೂಲಕರವಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ವಲಸೆಗಳನ್ನು ನಿರಂತರವಾಗಿ ಮಾಡುತ್ತಿವೆ. ಮನುಷ್ಯ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು ಸಹ ವಲಸೆಯನ್ನು ಮಾಡುತ್ತಿರುತ್ತವೆ. ಆ ಪ್ರಕ್ರಿಯೆಯಲ್ಲಿ ಘರ್ಷಣೆಗಳು ಸಹ ನಿರಂತರವಾಗಿ ನಡೆಯುತ್ತದೆ.

ಮೂಲತಃ ಮನುಷ್ಯನ ನಾಗರಿಕತೆಗಳು ನದಿ ತೀರಗಳಲ್ಲಿ ಬೆಳವಣಿಗೆ ಹೊಂದಿವೆ. ಮುಂದೆ ಜನಸಂಖ್ಯೆ ಹೆಚ್ಚಳ, ಅವಶ್ಯಕತೆ, ಅನಿವಾರ್ಯತೆ, ಪ್ರಾಕೃತಿಕ ವಿಕೋಪ, ಮಹತ್ವಾಕಾಂಕ್ಷೆ, ದುರಾಸೆ, ತಪ್ಪು ನಿರ್ಧಾರಗಳ ಕಾರಣದಿಂದ ಅದು ಬೆಳೆಯುತ್ತಾ, ಹಳ್ಳಿ, ಗ್ರಾಮ, ಪಟ್ಟಣ, ನಗರ, ಮೆಟ್ರೋಪಾಲಿಟನ್ ಸಿಟಿಗಳಾಗಿ ಅಭಿವೃದ್ಧಿ ಹೊಂದಿದವು. ನದಿ ಸಮುದ್ರ ಬೆಟ್ಟ ಗುಡ್ಡ ಕಾಡು ಮೇಡು ಮರುಭೂಮಿ ಬಯಲು ಪ್ರದೇಶ ಎಲ್ಲವನ್ನೂ ದಾಟಿ ಎಲ್ಲೆಂದರಲ್ಲಿ ವಾಸಿಸಲು ಸ್ಥಳಾವಕಾಶ ಸೃಷ್ಟಿಸಿಕೊಂಡ. ಭವಿಷ್ಯದಲ್ಲಿ ಚಂದ್ರನಲ್ಲಿಯೂ ವಾಸಿಸುವ ಯೋಜನೆ ರೂಪಿಸುತ್ತಿರುವ ಮಾಹಿತಿ ಇದೆ.

ಈ ಭೂಮಿ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಮೂಲತಃ ಯಾರಿಗೂ ಸೇರಿದ್ದಲ್ಲ. ಆದರೆ ಸಾಕಷ್ಟು ಹೋರಾಟ, ಹಾರಾಟ, ರಕ್ತಪಾತದ ನಂತರ ದೇಶಗಳಾಗಿ ವಿಭಜನೆ ಹೊಂದಿ ಒಂದು ರೂಪಕ್ಕೆ ಬಂದಿದೆ.

ಕೃಷಿ, ಕೃಷಿ ಆಧಾರಿತ ಪಶುಸಂಗೋಪನೆ ಮುಂತಾದ ಕೆಲಸಗಳಲ್ಲಿ, ಕಡಿಮೆ ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಜೀವನ ಕ್ರಮ ಸಾಮಾನ್ಯ ಹಳ್ಳಿಯ ಜೀವನ ಶೈಲಿಯಾಗಿತ್ತು. ನಂತರದಲ್ಲಿ ಜನಸಂಖ್ಯೆ ಸ್ಪೋಟ, ಕೃಷಿ ರಂಗದ ಸವಾಲುಗಳು, ನಗರಗಳ ಬೆಳವಣಿಗೆ ಮತ್ತು ಆಕರ್ಷಣೆ, ಶೈಕ್ಷಣಿಕ ಕ್ರಾಂತಿ ಎಲ್ಲವೂ ಸೇರಿ ಒಂದು ಇಡೀ ಜನಾಂಗ ನಗರಗಳತ್ತ ಮುಖ ಮಾಡಿತು.

ಈ ನಾಗರಿಕ ಮನುಷ್ಯ ಭೂಮಿಯನ್ನು ಸದ್ಯಕ್ಕೆ ಏಳು ಖಂಡಗಳಾಗಿ, 200 ಕ್ಕೂ ಹೆಚ್ಚು ದೇಶಗಳಾಗಿ, ಇನ್ನೆಷ್ಟೋ ರಾಜ್ಯಗಳಾಗಿ, ಮತ್ತೆಷ್ಟೋ ಜಿಲ್ಲೆ, ಗ್ರಾಮಗಳಾಗಿ ಕೊನೆಗೆ 800 ಕೋಟಿ ಜನಸಂಖ್ಯೆಯವರೆಗೂ ಬೆಳೆಸಿದ್ದಾನೆ. ನಾಗರಿಕತೆಯ ಬೆಳವಣಿಗೆಯಲ್ಲಿ ಮುಕ್ತವಾಗಿದ್ದ ಮನುಷ್ಯ ನಂತರದಲ್ಲಿ ಅನೇಕ ಕೋಟೆಗಳೊಳಗೆ ಬಂದಿಯಾಗಿದ್ದಾನೆ. ಆತನ ಆಸೆ ಆಕಾಂಕ್ಷೆಗಳು ಮಿತಿಮೀರಿವೆ. ಇಂತಹ ಸಂದರ್ಭದಲ್ಲಿ ಈ ವಲಸೆ ಎಂಬುದು ಆಧುನಿಕ ಕಾಲದಲ್ಲಿ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

ಈ ವಲಸೆಗೆ ಕೇವಲ ಹೊಟ್ಟೆಪಾಡಿನ ಅನಿವಾರ್ಯತೆ ಮಾತ್ರವಲ್ಲ ಯುದ್ಧ, ಪ್ರಾಕೃತಿಕ ವಿಕೋಪ, ಭಯೋತ್ಪಾದನೆ, ದುರಾಸೆ, ಸಾಧಿಸುವ ಛಲ, ಅಸಹಾಯಕತೆ, ಅವಕಾಶ ವಂಚನೆ ಹೀಗೆ ನಾನಾ ಕಾರಣಗಳಿಂದ ವಲಸೆ ನಡೆಯುತ್ತದೆ. ಅದು ವೀಸಾ, ಪಾಸ್ಪೋರ್ಟ್ ಎಂಬ ಪ್ರಕ್ರಿಯೆ ಮೂಲಕ ನಡೆದರೆ ಅದು ಅಧಿಕೃತವಾಗಿರುತ್ತದೆ. ಅದು ಸಾಧ್ಯವಿಲ್ಲ, ಅಸಾಧ್ಯ ಅಥವಾ ನಮಗೆ ಕೈಗೆಟಕುವುದಿಲ್ಲ ಎನಿಸಿದಾಗ ಈ ಅಕ್ರಮ ವಲಸೆಗಳು ನಡೆಯುತ್ತದೆ. ಅದಕ್ಕೆ ಬೃಹತ್ ವಂಚನೆಯ ಅನಧಿಕೃತ ಜಾಲಗಳೇ ಇದೆ.

ವಲಸೆಗಳಿಂದ ಅನೇಕ ಸಮಸ್ಯೆಗಳು ವಲಸೆ ಹೋಗಿರುವವರಿಗೂ ಮತ್ತು ಅವರು ನೆಲೆಸಿರುವ ದೇಶಗಳಿಗೂ ಸೃಷ್ಟಿಯಾಗುತ್ತದೆ. ಒಂದು ದೇಶ ಅಥವಾ ರಾಜ್ಯ ತನ್ನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುತ್ತಿರುತ್ತದೆ. ಆಗ ಲೆಕ್ಕಕ್ಕೇ ಸಿಗದ ಈ ಅಕ್ರಮ ವಲಸೆಗಾರರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಅದನ್ನು ಹೇಗೋ ನಿಭಾಯಿಸಬಹುದು. ಆದರೆ ಇದರಿಂದಾಗಿ ಅತಿ ಮುಖ್ಯವಾಗಿ ನಿರುದ್ಯೋಗ ಮತ್ತು ಅಪರಾಧಗಳು ಹೆಚ್ಚಾಗುತ್ತವೆ ಎಂದು ಎಲ್ಲಾ ದೇಶಗಳು ಭಾವಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ವಲಸಿಗರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮತ್ತು ಮೂಲನಿವಾಸಿಗಳ ಉದ್ಯೋಗಗಳನ್ನು ಕಸಿಯುತ್ತಿರುವುದರಿಂದ ಸರ್ಕಾರಗಳು ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದಾರೆ. ಭಾರತದಲ್ಲಿ ಕೂಡ ಅಕ್ರಮ ವಲಸಿಗರನ್ನು ಹೊರಹಾಕಲು ಸಾಕಷ್ಟು ಒತ್ತಡ ಇದೆ. ಇದು ಒಂದು ರೀತಿಯ ವಾಸ್ತವಿಕ ದೃಷ್ಟಿಕೋನ.

ಹಾಗೆಯೇ ಅಕ್ರಮ ವಲಸಿಗರು ಮನುಷ್ಯ ಜೀವಿಗಳು. ಅಪರಾಧಗಳನ್ನು ಹೊರತುಪಡಿಸಿ ಹೊಟ್ಟೆಪಾಡಿಗಾಗಿ, ಸಾಧನೆಗಾಗಿ, ಉತ್ತಮ ಬದುಕಿಗಾಗಿ ಅಥವಾ ಪ್ರಾಣ ರಕ್ಷಣೆಗಾಗಿ ತಾವಿರುವ ಸ್ಥಳದಿಂದ ಇನ್ನೊಂದು ರಕ್ಷಣಾತ್ಮಕ ಸ್ಥಳಕ್ಕೆ ವಲಸೆ ಹೋಗುವುದು ದೊಡ್ಡ ತಪ್ಪೇನು ಅಲ್ಲ. ಅವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಒಂದು ವೇಳೆ ಅವರು ಆ ಪ್ರದೇಶದಲ್ಲಿ ಅಪರಾಧಗಳನ್ನು ಮಾಡಿದಲ್ಲಿ ಅದಕ್ಕೆ ಕಠಿಣ ಶಿಕ್ಷೆ ವಿಧಿಸುವುದನ್ನು ಒಪ್ಪಬಹುದು. ಆದರೆ ಉದ್ಯೋಗಕ್ಕಾಗಿಯೋ, ಬೇರೆ ಉದ್ದೇಶದಿಂದಲೋ ಬಂದಾಗ ಅವರ ಬಗ್ಗೆ ಒಂದಷ್ಟು ಮಾನವೀಯ ಕಾಳಜಿ ತೋರಿಸಬೇಕಾಗಿರುವುದು ಎಲ್ಲರ ಕರ್ತವ್ಯ.

ಹಿಂದಿನಿಂದಲೂ ಎಲ್ಲಾ ದೇಶಗಳಲ್ಲೂ ಸಹ ವಲಸಿಗರನ್ನು ಅನಿವಾರ್ಯವಾಗಿ ಸೇರಿಸಿಕೊಂಡು ಅವರಿಗೆ ಹೊಸ ಬದುಕು ನಿರ್ಮಿಸಿಕೊಳ್ಳಲು ಅವಕಾಶ ಕೊಟ್ಟಿವೆ. ಕಷ್ಟ ಕಾಲದಲ್ಲಿ ಮನುಷ್ಯನ ನಿಜ ರೂಪ ಬಯಲಾಗುತ್ತದೆ. ಈ ಬದಲಾವಣೆ ಮಾನವೀಯ ಅಂತಃಕರಣವನ್ನು ಹೊಮ್ಮಿಸಬೇಕೆ ಹೊರತು ರಾಕ್ಷಸ ಗುಣವನ್ನಲ್ಲ.

ಅಕ್ರಮ ವಲಸೆ ತಪ್ಪು. ದಯವಿಟ್ಟು ಸಕ್ರಮ ಬದುಕು ನಮ್ಮದಾಗಲಿ.
ಗಂಜಿ ಕುಡಿದಾದರೂ ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳೋಣ. ಹಾಗೆಯೇ ಅನಿವಾರ್ಯವಾದ ಮನುಷ್ಯನ ಸಣ್ಣ ತಪ್ಪುಗಳಿಗೆ ದುರಹಂಕಾರದ ಅಮಾನವೀಯ ಶಿಕ್ಷೆ ನೀಡುತ್ತಿರುವ ಸರ್ಕಾರಗಳ ನೀತಿಯನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಖಂಡಿಸೋಣ. ಅಂತಿಮವಾಗಿ ಈ ಜಗತ್ತಿನಲ್ಲಿ ಮಾನವಿಯತೆ ಮತ್ತು ಜೀವಪರ ನಿಲುವುಗಳು ಸದಾ ಜಾರಿಯಲ್ಲಿರಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

Immediate Gambling Establishment Play: The Practical Way to Delight In Online Gambling

For passionate casino enthusiasts and wagering lovers, on-line gambling establishments have changed the means we…

1 hour ago

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ…….

ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…

1 hour ago

The Ultimate Overview to Free Online Live Roulette Game

Are you a fan of gambling enterprise video games? Do you appreciate the excitement of…

11 hours ago

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

21 hours ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

1 day ago

Instant Play Casino

Instant play casinos allow you to play casino games online without installing any software. These…

2 days ago