3 ಎಕರೆ ಜಮೀನಿನಲ್ಲಿ 17 ಲಕ್ಷ ಆದಾಯ: ಸಮಗ್ರ ಕೃಷಿಯಿಂದ ರೈತಕವಿ ರಾಜಣ್ಣ ಸಾಧನೆ

 

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದಷ್ಟೇ ಮುಖ್ಯವಲ್ಲ, ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಂಡು ಉತ್ತಮ ಬೆಲೆ ಪಡೆಯುವುದೂ ಅಷ್ಟೇ ಮುಖ್ಯ. ಮಾರುಕಟ್ಟೆಯ ಏರಿಳಿತ, ಮಧ್ಯವರ್ತಿಗಳ ಹಾವಳಿ ಹಾಗೂ ಕೃಷಿ ಕಾರ್ಮಿಕರ ಕೊರತೆಯ ನಡುವೆ ಸಣ್ಣ ಮತ್ತು ಅತಿಸಣ್ಣ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಮಾರಹಳ್ಳಿ ಗ್ರಾಮದ ಎಂ.ಸಿ. ರಾಜಣ್ಣ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆಯ ಮೂಲಕ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.

ಕೇವಲ 3 ಎಕರೆ 28 ಗುಂಟೆ ಜಮೀನಿನಲ್ಲಿ ಬೆಳೆ ವೈವಿಧ್ಯೀಕರಣ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಮೀನು ಸಾಕಣೆ ಹಾಗೂ ಕುರಿ ಮತ್ತು ಮೇಕೆ ಸಾಕಣೆಯನ್ನು ಸಮನ್ವಯಗೊಳಿಸಿ ವಾರ್ಷಿಕ ₹17 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.

ಒಂದೇ ಬೆಳೆಯನ್ನು ಅವಲಂಬಿಸದೆ ರಾಗಿ, ತೊಗರಿ, ಅವರೆ, ಅಲಸಂಧಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಬೆಣ್ಣೆಹಣ್ಣು (ಆವಕಾಡೊ), ನೇರಳೆ, ಮಾವು, ನೀರುಸೇಬು, ಖರ್ಜೂರ, ಹಲಸು, ಸೀತಾಫಲ ಹಾಗೂ ಅಂಜೂರ ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ವಿಸ್ತರಿಸಿಕೊಂಡಿದ್ದಾರೆ.

ದೈನಂದಿನ ಆದಾಯಕ್ಕಾಗಿ ಹೈನುಗಾರಿಕೆ, ಸ್ಥಳೀಯ ತಳಿಗಳ ಕೋಳಿ ಸಾಕಣೆ, ಹೆಚ್ಚುವರಿ ಆದಾಯಕ್ಕಾಗಿ ಮೀನು ಸಾಕಣೆ ಹಾಗೂ ದೀರ್ಘಕಾಲೀನ ಆದಾಯದ ದೃಷ್ಟಿಯಿಂದ ಕುರಿ ಮತ್ತು ಮೇಕೆ ಸಾಕಣೆಯನ್ನೂ ಕೈಗೊಂಡಿದ್ದಾರೆ. ಕೃಷಿ ತ್ಯಾಜ್ಯ ಹಾಗೂ ಜಾನುವಾರುಗಳ ಗೊಬ್ಬರವನ್ನು ಜಮೀನಿನಲ್ಲಿಯೇ ಬಳಕೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ರಸಗೊಬ್ಬರದ ವೆಚ್ಚವನ್ನೂ ಕಡಿಮೆ ಮಾಡುತ್ತಿದ್ದಾರೆ.

ನೇರ ಮಾರುಕಟ್ಟೆಗೆ ಆದ್ಯತೆ

ರಾಜಣ್ಣ ಅವರ ಕೃಷಿ ಯಶೋಗಾಥೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಮಧ್ಯವರ್ತಿಗಳ ಹಾವಳಿಯಿಂದ ದೂರ ಉಳಿದು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು. ಕೃಷಿಮೇಳ, ರೈತಸಂತೆ, ವಿಶೇಷ ಮೇಳಗಳು ಹಾಗೂ ವಸತಿ ಸಮುಚ್ಚಯಗಳಿಗೆ ಮನೆ ಬಾಗಿಲಿಗೆ ತಾಜಾ ಕೃಷಿ ಉತ್ಪನ್ನಗಳನ್ನು ಪೂರೈಸುವ ಮೂಲಕ ಗ್ರಾಹಕರೊಂದಿಗೆ ನೇರ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಮುಂಗಡ ಬೇಡಿಕೆ ಹಾಗೂ ಒಪ್ಪಂದಗಳ ಮೂಲಕವೂ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ನ್ಯಾಯಯುತ ಬೆಲೆ ಪಡೆಯುವುದರ ಜೊತೆಗೆ ನಿಷ್ಠಾವಂತ ಗ್ರಾಹಕರ ಬಳಗವನ್ನೂ ರೂಪಿಸಿಕೊಂಡಿದ್ದಾರೆ.

ಕೃಷಿ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ, ಹನಿ ನೀರಾವರಿ, ರಸಾವರಿ ಹಾಗೂ ರಾಸಾಯನಿಕಗಳ ಮಿತ ಮತ್ತು ನಿಖರ ಬಳಕೆಗೆ ಆದ್ಯತೆ ನೀಡಿದ್ದಾರೆ. ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು ಕುಟುಂಬದ ಶ್ರಮವನ್ನು ಕೃಷಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿದ ಎಂ.ಸಿ. ರಾಜಣ್ಣ, ರೈತರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಹೊಂದಬೇಕು. ಇದರಿಂದ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ವಿಜ್ಞಾನಿಗಳ ಮಾರ್ಗದರ್ಶನ ದೊರೆಯುತ್ತದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೃಷಿಯ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಾಜಣ್ಣ ಅವರು ಸಾಂಸ್ಕೃತಿಕವಾಗಿಯೂ ಬಹುಮುಖ ಪ್ರತಿಭೆ ಹೊಂದಿದ್ದಾರೆ. ತೂಬಗೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತಕವಿ ಎಂದೇ ಪರಿಚಿತರಾಗಿದ್ದಾರೆ. ನಾಟಕ ರಚನೆ ಮತ್ತು ನಿರ್ಮಾಣ, ಗಾಯನ, ನಟನೆ, ಬರವಣಿಗೆ ಹಾಗೂ ಕಲಾ ಪ್ರದರ್ಶನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಬದುಕು ಮತ್ತು ಕೃಷಿ ಚಟುವಟಿಕೆಗಳನ್ನು ಆಧರಿಸಿ ಸಾಹಿತ್ಯ ರಚಿಸುವ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಡಾ. ಗೋಪಾಲ ಅವರು ಮಾತನಾಡಿ, ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದನ್ನೂ ಒಂದು ರೀತಿಯ ಆದಾಯವೆಂದು ಪರಿಗಣಿಸಬೇಕು. ಕೇವಲ ಉತ್ಪಾದನೆ ಹೆಚ್ಚಿಸುವುದಕ್ಕೆ ಸೀಮಿತವಾಗದೆ, ಉತ್ಪನ್ನಗಳ ಮಾರಾಟ ಹಾಗೂ ಮಾರುಕಟ್ಟೆ ವ್ಯವಸ್ಥೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಒಟ್ಟಿನಲ್ಲಿ, ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಜಮೀನಿನ ವಿಸ್ತೀರ್ಣವೇ ಮಾನದಂಡವಲ್ಲ ಎಂಬುದನ್ನು ರಾಜಣ್ಣ ಅವರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೆಳೆ ವೈವಿಧ್ಯೀಕರಣ, ಸಮಗ್ರ ಕೃಷಿ ಪದ್ಧತಿ, ಸ್ವಾವಲಂಬಿ ಶ್ರಮ, ಪಶುಸಂಗೋಪನೆ, ವೆಚ್ಚ ನಿಯಂತ್ರಣ ಹಾಗೂ ನೇರ ಮಾರುಕಟ್ಟೆ ಸಂಪರ್ಕದ ಮೂಲಕ ಸಣ್ಣ ರೈತರೂ ಆರ್ಥಿಕವಾಗಿ ಸಬಲರಾಗಬಹುದು ಎಂಬುದಕ್ಕೆ ಅವರ ಕೃಷಿ ಯಶೋಗಾಥೆ ಇತರ ರೈತರಿಗೆ ಪ್ರೇರಣೆಯಾಗಿದೆ.

Ramesh Babu

Journalist

Recent Posts

ಒಬ್ಬರ ರಕ್ತದಾನದಿಂದ ನಾಲ್ವರಿಗೆ ಜೀವದಾನ- ಡಾ. ಮುರಳಿಮೋಹನ್

ದೊಡ್ಡಬಳ್ಳಾಪುರ: ರಕ್ತದಾನವು ಮಹಾದಾನವಾಗಿದ್ದು, ಒಬ್ಬ ವ್ಯಕ್ತಿ ಒಂದು ಬಾರಿ ರಕ್ತದಾನ ಮಾಡುವುದರಿಂದ ನಾಲ್ವರು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಏಡ್ಸ್…

12 minutes ago

ಸ್ಮಶಾನದ ರಸ್ತೆ ಒತ್ತುವರಿ ತೆರವಿಗೆ ಒತ್ತಾಯಿಸಿ ಅಣಕು ಶವವಿಟ್ಟು ಪ್ರತಿಭಟನೆ

ದೊಡ್ಡಬಳ್ಳಾಪುರ: ನಗರದ ವಿವಾದಿತ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಹಲವು…

1 hour ago

” ಸಂವಿಧಾನ ” ಈ ನೆಲದ ಜೀವನ ಶೈಲಿಯ ಅಧಿಕೃತತೆ…….

  ನವೆಂಬರ್ 26... ಕಾನೂನು ದಿನ - ಈಗ - ಸಂವಿಧಾನ ದಿನ............ ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ…

12 hours ago

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ವಿಚಾರ: ಕೊನೆಗೂ ಎಫ್‌ಐಆರ್ ದಾಖಲು

ದೊಡ್ಡಬಳ್ಳಾಪುರ: ಕರ್ತವ್ಯ ನಿರತ ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಸಮವಸ್ತ್ರಕ್ಕೆ ಕೈಹಾಕಿ ತಳ್ಳಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

23 hours ago

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕವಾಗಿ ಹಲ್ಲೆ; ಸಮವಸ್ತ್ರ ಹರಿದು ದರ್ಪ ಮೆರೆದ ವ್ಯಕ್ತಿ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ದೊಡ್ಡಬಳ್ಳಾಪುರ: ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರ ಮೇಲೆಯೇ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ನಡು ರಸ್ತೆಯಲ್ಲೇ ಸಮವಸ್ತ್ರ ಹರಿದು ದರ್ಪ ಮೆರೆದಿರುವ…

1 day ago

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ ಪ್ರಕಟ

ದೊಡ್ಡಬಳ್ಳಾಪುರ: ಮುಂದಿನ ಐದು ವರ್ಷಗಳ ಅವಧಿಗೆ ನಡೆಯಲಿರುವ ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ…

1 day ago