
ಹಾವು ಎಂದರೆ ಮೊದಲು ಮನಸಿನಲ್ಲಿ ಹುಟ್ಟುವ ಭಾವನೆ ಭಯ ಮತ್ತು ಆತಂಕ. ಇಂತ ಭಯವನ್ನು ಹೋಗಲಾಡಿಸಿ ಹಾವುಗಳ ಬಗ್ಗೆ ಕಾಳಜಿ ಬೆಳೆಯುವಂತೆ ಅರಿವು ಮೂಡಿಸಲು ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.
ಹಾವುಗಳ ಬಗ್ಗೆ ಇರುವ ತಪ್ಪು ನಂಬಿಕೆಗಳನ್ನು ಮುರಿಯೋಣ. ಹಾವು ನಮಗೆ ಅರ್ಥವಾದಷ್ಟು ಹತ್ತಿರವಾಗುತ್ತದೆ. ಹಾಲು ಹಾವಿನ ಆಹಾರ ಅಲ್ಲ. ಹಾವು ದ್ವೇಷ ಸಾದಿಸುವುದಿಲ್ಲ. ಹಾವಿನ ದೇಹದಲ್ಲಿ ನಾಗಮಣಿ ಇಲ್ಲ. ಹಾವಿಗೆ ಕೂದಲು ಬೆಳೆಯುವುದಿಲ್ಲ. ಹಾವಿಗೆ ಹೊರ ಕಿವಿ ಇಲ್ಲದ ಕಾರಣ ಪುಂಗಿಯ ನಾದ ಅಥವ ಯಾವುದೆ ಶಬ್ದ ಕೇಳಿಸುವುದಿಲ್ಲ. ಹಾವು ಕಂಪನಗಳನ್ನಷ್ಟೇ ಗ್ರಹಿಸಬಲ್ಲದು. ಹಾವಿನ ಉಸಿರು, ಬಾಲ ತಾಗಿದರೆ ಏನೂ ಆಗುವುದಿಲ್ಲ. ಕೆಲವೊಮ್ಮೆ ರಸ್ತೆ ಹೊಲಗಳಲ್ಲಿ ಎರಡು ಹಾವುಗಳು ಸುತ್ತುವರಿದಿರುವುದು ಸಂಭೋಗವಲ್ಲ. ಅದು ಎರಡು ಗಂಡು ಹಾವುಗಳು ಹೆಣ್ಣಿಗಾಗಿ ನಡೆಸುವ ಜೀವಹಾನಿಯಾಗದ ಬಲಪ್ರದರ್ಶನ.
ಮನುಷ್ಯರಲ್ಲಿ ಸಯಾಮಿಯ ತೊಂದರೆಯಂತೆ ಹಾವಿನಲ್ಲಿ ಎರಡು ತಲೆ ಇರುವುದು ಒಂದು ಕಾಯಿಲೆ ಮತ್ತು ಅದು ಹೆಚ್ಚು ದಿನ ಬದುಕುವುದಿಲ್ಲ. ಬಲದ ಭಾಗದಲ್ಲಿ ತಲೆ ಇರುವುದಿಲ್ಲ. ಚಿತ್ರಗಳಲ್ಲಿ ನೋಡುವಂತೆ 3, 5, 7 ತಲೆ ಇರುವುದಿಲ್ಲ.

ಅನುಕೂಲಗಳು-
ಹವುಗಳು ಆಹಾರ ಸರಪಳಿಯ ಭಾಗ. ಹಾವು ರೈತ ಸ್ನೇಹಿ – ಇಲಿಗಳನ್ನು ಬಿಳದೊಳಗೆ ಹೊಕ್ಕು ಹಿಡಿಯುತ್ತದೆ. ಹಾವಿನ ಆಕಾರದಿಂದ ಪ್ರೆರೇಪಿತಗೊಂಡು ಸೃಷ್ಟಿಸಿರುವ ರೋಬೋಟ್ಗಳು ಭೂಕಂಪದ ವೇಳೆ ಬಿದ್ದ ಕಟ್ಟಡಗಳ ಒಳಗೆ ಸುಲಭವಾಗಿ ಹೋಗಿ ಮಾಹಿತಿ ನೀಡುತ್ತವೆ.
ಪರೋಕ್ಷವಾಗಿ ಬೀಜ ಪ್ರಸರಣವೂ ಮಾಡುತ್ತವೆ. ಹಾವಿನ ವಿಷದಿಂದ, ಹಾವು ಕಡಿತಕ್ಕೆ ಔಷಧಿ ಮತ್ತು ಹಲವಾರು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲಾಗಿದೆ ಹಾಗೂ ಇನ್ನೂ ಹಲವಾರು ಸಂಶೋಧನೆಗಳು ಮಾನವನ ಜೀವ ಉಳಿಸುವ ಔಷಧಿಗಳಿಗಾಗಿ ನಡೆಯುತ್ತಿದೆ ಎಂದು ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ ತಿಳಿಸಿದ್ದಾರೆ.