Ramachandra Rao Suspend : ಡಾ.ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್: ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ

ರಾಸಲೀಲೆ ಪ್ರಕರಣದಲ್ಲಿ ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿ ಡಾ.ರಾಮಚಂದ್ರ ರಾವ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಚೇರಿಯಲ್ಲಿ ಮಹಿಳೆಯರ ಜೊತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ಆಡಿಯೋ ಹಾಗೂ ವಿಡಿಯೋ ಜನವರಿ 19 ರಂದು ವೈರಲ್ ಆಗಿತ್ತು. ರಾಜ್ಯದಾದ್ಯಂತ ವೈರಲ್ ಆಗುತ್ತಿದ್ದಂತೆ ಸರಕಾರಕ್ಕೂ ಇದು ಇರುಸುಮುರುಸಾಗಿತ್ತು. ನಿನ್ನೆ ಸಿಎಂ ಸಿದ್ದರಾಮಯ್ಯ ಅವರೂ ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಿದ್ದರು. ಆದರೆ ಎಐ ಸೃಷ್ಟಿ ಮಾಡಿರುವ ವಿಡಿಯೋ ಎಂದು ರಾಮಚಂದ್ರ ರಾವ್ ಆರೋಪ ತಳ್ಳಿಹಾಕಿದ್ದರು.

ಮಹಿಳೆಯರ ಜತೆ ಸರಸವಾಡಿರುವ ವಿಡಿಯೊ ಹಾಗೂ, ಮಹಿಳೆ ಜತೆ ಮಾತನಾಡಿದ್ದಾರೆ ಎನ್ನಲಾದ ಎರಡು ಆಡಿಯೊಗಳು ವೈರಲ್‌ ಆಗಿವೆ. ಪೊಲೀಸ್‌ ಸಮವಸ್ತ್ರದಲ್ಲಿಯೇ ಮಹಿಳೆಯನ್ನು ಮುದ್ದಾಡಿ, ಚುಂಬಿಸಿರುವ 47 ಸೆಕೆಂಡ್‌ಗಳ ವಿಡಿಯೊ ವೈರಲ್‌ ಆಗುತ್ತಿರುವುದು ಪೊಲೀಸ್‌ ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ. ಮೂರು ಪ್ರತ್ಯೇಕ ವಿಡಿಯೊಗಳನ್ನು ಕೂಡಿಸಿ 47 ಸೆಕೆಂಡ್‌ಗಳ ವಿಡಿಯೊ ಮಾಡಲಾಗಿದೆ. ಮೂರು ವಿಡಿಯೊಗಳು ಸರಕಾರಿ ಕಚೇರಿ ಕೊಠಡಿಯಲ್ಲಿ ಮೊಬೈಲ್‌ ಬಳಸಿ ಸೆರೆಹಿಡಿದಿರುವ ಅನುಮಾನವಿದ್ದು, ಒಂದು ವಿಡಿಯೊದಲ್ಲಿ ರಾಮಚಂದ್ರ ರಾವ್‌ ಸಮವಸ್ತ್ರ ಧರಿಸಿದ್ದಾರೆ.

ವೈರಲ್‌ ವಿಡಿಯೊ ಹಳೆಯದ್ದು ಎಂದಾ­ದರೂ ಯಾವಾಗ ಸೆರೆಹಿಡಿಯಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೊದ ಸಾಚಾತನ ತನಿಖೆಯಿಂದ ಗೊತ್ತಾಗಬೇಕಿದೆ. ಈ ಬೆನ್ನಲ್ಲೇ ಘಟನೆ ಸಂಬಂಧ ತನಿಖೆ ನಡೆಸಿ ವರದಿ ಬಂದ ಬಳಿಕ ಡಿಜಿಪಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ‘‘ಯಾವ ಹಿರಿಯ ಪೊಲೀಸ್‌ ಅಧಿಕಾರಿಯು ಕೂಡ ಕಾನೂನಿಗಿಂತ ದೊಡ್ಡವರಲ್ಲ ಎಂದು ಹೇಳಿದ್ದರು..

ಸೋಮವಾರ ಮಧ್ಯಾಹ್ನ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ತಮ್ಮ ಕಚೇರಿಯನ್ನು ದಿಢೀರ್‌ ತೊರೆದ ರಾಮಚಂದ್ರರಾವ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ, ಗೃಹ ಸಚಿವರು ಅನಾರೋಗ್ಯದ ಕಾರಣ ಹೇಳಿ ಭೇಟಿಗೆ ಅವಕಾಶ ನೀಡಿಲ್ಲ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಡಿಜಿಪಿ ರಾಮಚಂದ್ರರಾವ್‌, ‘ವಿಡಿಯೊ ಕಂಡು ಆಘಾತ­ ವಾಗಿದೆ. ವೈರಲ್‌ ಆದ ವಿಡಿಯೊ ಕೃತಕವಾಗಿ ಸೃಷ್ಟಿಸ­ಲಾಗಿದೆ. ಈ ಬಗ್ಗೆ ತನಿಖೆಯಾಗಬೇಕಿದೆ,’’ ಎಂದಿದ್ದಾರೆ.

ಷಡ್ಯಂತ್ರ ರೂಪಿಸಿ ನಕಲಿ ವಿಡಿಯೊ ಹರಿಬಿಡಲಾಗಿದೆ. ಈ ಬಗ್ಗೆ ವಕೀಲರ ಜತೆ ಚರ್ಚೆ ನಡೆಸಿ ಕಾನೂನು ಹೋರಾಟ ನಡೆಸುತ್ತೇನೆ,’ ಎಂದು ತಿಳಿಸಿದ್ದಾರೆ. ಅಲ್ಲದೆ, ‘ಇದು ಹಳೆಯ ವಿಡಿಯೊ,’ ಎಂದ ರಾಮಚಂದ್ರ ರಾವ್‌, ‘ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕೆಲಸ ಮಾಡಿದ್ದೆ,’ ಎಂದಷ್ಟೇ ಹೇಳಿ ಘಟನೆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಮತ್ತೊಂದೆಡೆ ಸರಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ ಡಿಜಿಪಿ ರಾಮಚಂದ್ರ ರಾವ್‌ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಮುಂದೇನಾಗಲಿದೆ?: ಸರಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಮಹಿಳೆ ಜತೆ ರಾಮಚಂದ್ರ­ರಾವ್‌ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ ಎನ್ನಲಾದ ವಿಡಿಯೊ ಹಾಗೂ ಆಡಿಯೊ ಮಾತುಕತೆ ಕುರಿತು ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿರಾಜ್ಯ ಸರಕಾರವು ಡಿಜಿಪಿ ರಾಮಚಂದ್ರರಾವ್‌ ಅವರನ್ನು ಅಮಾನತುಗೊಳಿಸಿದೆ. ಅಲ್ಲದೆ ಇಡೀ ಘಟನೆ ಸಂಬಂಧ ತನಿಖೆಗೆ ಆದೇಶಿಸಬಹುದು. ಒಂದು ವೇಳೆ ತಮ್ಮ ವಿಡಿಯೊ ಕೃತಕವಾಗಿ ಸೃಷ್ಟಿಸಲಾಗಿದೆ ಎನ್ನುತ್ತಿರುವ ರಾಮಚಂದ್ರರಾವ್‌, ಪೊಲೀಸರಿಗೆ ದೂರು ನೀಡಿದರೆ ಪ್ರತ್ಯೇಕ ಪ್ರಕರಣ ದಾಖಲಾಗಿ ವಿಡಿಯೊ ಸೆರೆಹಿಡಿದಿರುವವರು ಹಾಗೂ ವೈರಲ್‌ ಮಾಡಿದವರು ಕಾನೂನು ಉರುಳಿಗೆ ಸಿಲುಕಬಹುದು.

Leave a Reply

Your email address will not be published. Required fields are marked *

error: Content is protected !!