ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್. ಸೀತಾರಾಮ್ ಮತ್ತು ಮಾಜಿ ಐಆರ್‌ಎಸ್ ಅಧಿಕಾರಿ ಎಚ್ ಪಿ ಸುಧಾಮ್ ದಾಸ್ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ (MLC) ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶನಿವಾರ ನಾಮನಿರ್ದೇಶನ ಮಾಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಸೀತಾರಾಮ್ ಅವರನ್ನು ಶಿಕ್ಷಣತಜ್ಞ ಕೋಟಾದ ಅಡಿಯಲ್ಲಿ, ಉಮಾಶ್ರೀ ಅವರು ನಟಿಯಾಗಿ ನೀಡಿದ ಕೊಡುಗೆಗಾಗಿ ಮತ್ತು ದಾಸ್ ಅವರನ್ನು ಸಾಮಾಜಿಕ ಕಾರ್ಯಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೆಸರುಗಳನ್ನು ಅಂತಿಮಗೊಳಿಸಿ, ಅನುಮೋದನೆಗಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಈ ಪೈಕಿ ಮೂವರ ಹೆಸರನ್ನು ರಾಜ್ಯಪಾಲರು ಅನುಮೋದನೆ ಮಾಡಿದ್ದಾರೆ.