KSRTC ಬಸ್ ನಲ್ಲಿ ಮಹಿಳೆಯ ಚಿನ್ನಾಭರಣ ಕಳವು: ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 4 ಲಕ್ಷದ 50 ಸಾವಿರ ಮೌಲ್ಯದ ಚಿನ್ನದ ಒಡವೆಗಳನ್ನ ಎಗರಿಸಿದ ಐನಾತಿ ಕಳ್ಳರು

ನ.6ರಂದು ಉಡುಪಿಯಲ್ಲಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಕಾವೇರಿಭವನ‌ ಬಸ್ ನಿಲ್ದಾಣದಲ್ಲಿ ದೊಡ್ಡಬಳ್ಳಾಪುರ ಬಸ್ ಹತ್ತಿ ಬರುವ ವೇಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ 4 ಲಕ್ಷದ 50 ಸಾವಿರ ಮೌಲ್ಯದ ಚಿನ್ನದ ಒಡವೆಗಳನ್ನ ಎಗರಿಸಿರುವ ಘಟನೆ ನಡೆದಿದೆ.

ತಾಲೂಕಿನ ನೆಲ್ಲುಕುಂಟೆ ಗ್ರಾಮದ ನಿವಾಸಿ ಪುಷ್ಪಾವತಿ ಚಿನ್ನದ ಒಡವೆಗಳನ್ನ‌ ಕಳೆದುಕೊಂಡ ಗೃಹಿಣಿ. ಉಡುಪಿಯಲ್ಲಿ ಸಂಬಂಧಿಕರ ಮದುವೆಗೆ ಚಿನ್ನದ ಒಡವೆಗಳನ್ನ ಹಾಕಿಕೊಂಡು ಹೋಗಿದ್ದರು. ಮದುವೆ ನಂತರ ಧರಿಸಿದ್ದ ಸುಮಾರು 33 ಗ್ರಾಂ ಚಿನ್ನದ ಲಾಂಗ್ ಚೈನ್, 31 ಗ್ರಾಂ ನೆಕ್ಲೆಸ್, 10 ಗ್ರಾಂ ವಾಲೆ ಜುಮುಕಿ, 8 ಗ್ರಾಂ ಮಾಟಿ, 3ಗ್ರಾಂನ‌ ಎರಡು ಚಿನ್ನದ ಉಂಗುರಗಳನ್ನು ತೆಗದು ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದರು. ಸಾರಿಗೆ ಬಸ್ ನಲ್ಲಿ ದೊಡ್ಡಬಳ್ಳಾಪುರಕ್ಕೆ ಬರುವ ಮಾರ್ಗಮಧ್ಯೆದಲ್ಲಿ ವ್ಯಾನಿಟಿ‌ ಬ್ಯಾಗ್ ನಲ್ಲಿದ್ದ 4 ಲಕ್ಷದ 50 ಸಾವಿರ ಮೌಲ್ಯದ ಚಿನ್ನದ ಆಭರಣಗಳನ್ನ ಕಳ್ಳರು ಕದ್ದೋಯ್ದಿದ್ದಾರೆ.

ನಾನು, ನನ್ನ ಮಗಳು, ನಮ್ಮ ಚಿಕ್ಕಮ್ಮ ಕಾಮಾಕ್ಷಿಪಾಳ್ಯದಲ್ಲಿರುವ ಸಂಬಂಧಿಕರ ಮನೆಯಿಂದ ಕಾವೇರಿ ಭವನ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಬಂದು ದೊಡ್ಡಬಳ್ಳಾಪುರಕ್ಕೆ ಬರುವ ಕೆಎಸ್ ಆರ್ ಟಿಸಿ ಬಸ್ ಹತ್ತಿ ಕುಳಿತೆವು, ಬಸ್ಸಿನಲ್ಲಿ ಹೆಚ್ಚು ಪ್ರಯಾಣಿಕರು ಇರಲಿಲ್ಲ, ನಮ್ಮ ಅಕ್ಕಪಕ್ಕ ಆಸನಗಳಲ್ಲಿ ಮಹಿಳೆಯರು ಕುಳಿತಿದ್ದರು, ಚಿನ್ನಾಭರಣ ಇದ್ದ ವ್ಯಾನಿಟಿ‌ ಬ್ಯಾಗ್ ನನ್ನ ಬಳಿಯೇ ಇತ್ತು, ನಾವು ಮೂರು ಜನ ಸ್ವಲ್ಪ ದೂರದವರೆಗೆ ನಿದ್ದೆ ಮಾಡಿದೆವು, ವ್ಯಾನಿಟಿ ಬ್ಯಾಗಿನೊಳಗೆ ಚಿಕ್ಕ ಪೊಟ್ಟಣದಲ್ಲಿ ನನ್ನ ಎಲ್ಲಾ ಚಿನ್ನಾಭರಣ‌ ಇಟ್ಟಿದ್ದೆ, ಹಣವನ್ನ ಅಲ್ಲೇ ಬಿಟ್ಟು ಒಡವೆಗಳನ್ನು ನಮಗೆ ಅರಿವಿಗೆ ಬಾರದ ರೀತಿಯಲ್ಲಿ ಯಾರೋ ಕದ್ದಿದ್ದಾರೆ. ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಬಂದು ಇಳಿದು ಹೂ ತೆಗೆದುಕೊಳ್ಳಲು ವ್ಯಾನಿಟಿ ಬ್ಯಾಗ್ ತೆಗೆದು ನೋಡಿದಾಗ ಒಡವೆಗಳು ಕಳವು ಆಗಿರುವುದು ಗೊತ್ತಾಯಿತು ಎಂದು ಒಡವೆಗಳನ್ನ ಕಳೆದುಕೊಂಡ ಪುಷ್ಪಾವತಿ ತಿಳಿಸಿದ್ದಾರೆ.

ನನಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು, ನನ್ನ ಗಂಡ ಅಡುಗೆ ಕೆಲಸ ಮಾಡಿ ಕೂಡಿಟ್ಟ ಹಣದಲ್ಲಿ ಆಭರಣಗಳನ್ನು ಮಾಡಿಸಿದ್ದೇವು. ಈ ಆಭರಣಗಳು‌ ನಮ್ಮ ಜೀವನಕ್ಕೆ ಆಧಾರವಾಗಿದ್ದವು. ಈಗ ಅವೂ ಇಲ್ಲದಾಗಿದೆ. ಚಿನ್ನಾಭರಣಗಳ ಕಳವು ಕುರಿತು ನಗರ ಠಾಣೆಯಲ್ಲಿ ದೂರು‌ ನೀಡಿದ್ದೇವೆ. ದಯವಿಟ್ಟು ನಮಗೆ ನಮ್ಮ ಒಡವೆಗಳನ್ನು ಪತ್ತೆ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು.

Leave a Reply

Your email address will not be published. Required fields are marked *