ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅ.19 ಹಾಗೂ 20 ರಂದು ನಡೆಯುವ ಜಿಲ್ಲಾಮಟ್ಟದ ಟೇಬಲ್ ಟಾಪ್ ಎಕ್ಸೈಸ್ ಮತ್ತು ಅಣುಕು ಪ್ರದರ್ಶನ ಕಾರ್ಯಕ್ರಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ವಿಪತ್ತು ನಿರ್ವಹಣೆ ಕುರಿತು ಆಯಾ ಇಲಾಖೆಯ ಜವಬ್ದಾರಿಯನ್ನು ತಿಳಿದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್. ಹೆಚ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ “ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ table top exercise ಮತ್ತು ಅಣುಕು ಪ್ರದರ್ಶನದ” ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಶೋಕ ಅಲ್ಫಾ-3 ಸಭಾಂಗಣದಲ್ಲಿ ನಡೆಯಲಿರುವ ಸಭೆಗೆ ಹಾಜರಿದ್ದು ತಮ್ಮ ತಮ್ಮ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಗಳು, ಸಹಕಾರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಕುರಿತು ಅರಿತುಕೊಳ್ಳಬೇಕು.
ಅಲ್ಲದೆ ಟೇಬಲ್ ಟಾಪ್ ಸಂಬಂಧಿಸಿದಂತೆ ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಇಲಾಖೆಗಳ ಪಾತ್ರ ಮತ್ತು ಜವಾಬ್ದಾರಿ, ಸಂಪನ್ಮೂಲ ವ್ಯವಸ್ಥೆ, ಜನ ಜಾನುವಾರುಗಳ ಸಂರಕ್ಷಣೆ ಕುರಿತು ಪಿ.ಪಿ.ಟಿ ಮೂಲಕ ಸಭೆಗೆ ಪ್ರಸ್ತುತ ಪಡಿಸುವಂತೆ ಸೂಚಿಸಿ ಅಕ್ಟೋಬರ್ 20ರಂದು ನಡೆಯಲಿರುವ ಅಣುಕು ಪ್ರದರ್ಶನದ ದಿನದಂದು ಜಿಲ್ಲೆಯ ಎಲ್ಲಾ ಇಲಾಖೆ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆ ಮುಖ್ಯಸ್ಥರಿಗೆ ವಹಿಸಿರುವ ಜವಾಬ್ದಾರಿಗಳನ್ನು ಚಾಚು ತಪ್ಪದೆ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ವಿಪತ್ತು ನಿರ್ವಹಣಾ ಪರಿಣಿತರಾದ ಬಸವರಾಜು ವಿ, ವಿಪತ್ತು ಸ್ಪಂದನ ವ್ಯವಸ್ಥೆ ತರಬೇತುದಾರ ಮತ್ತು ಬೋಧಕರಾದ ರಘು ಬಿ ವಿ, ಅಗ್ನಿಶಾಮಕ ದಳ, ಪೋಲಿಸ್ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.