IPL ಗೆದ್ದ ಸಿಎಸ್ ಕೆ; ಐದನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಮಾಹಿ ಪಡೆ

ಅಹಮದಾಬಾದ್: ಅತ್ಯಂತ ರೋಚಕತೆಯಿಂದ ಕೂಡಿದ್ದ 2023 ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ವರುಣ ದೇವನ ಅವಕೃಪೆಯ ನಡುವೆಯೂ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ ಕೆ ಬೌಲಿಂಗ್ ಆಯ್ದುಕೊಂಡು ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಲಾಯಿತು.

ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಾಹ (54) ಹಾಗೂ ಶುಭ್ಮನ್ ಗಿಲ್ (39) ಉತ್ತಮ ಅಡಿಪಾಯ ಹಾಕಿದರು, ಆದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಹಾಕಿದ ಬಾಲ್ ಗುರಿತಿಸುವಲ್ಲಿ ವಿಫಲವಾದ ಗಿಲ್ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಮಿಂಚಿನ ಸ್ಟಂಪಿಂಗ್ ಗೆ ಬಲಿಯಾದರು.

ನಂತರ ಬಂದ ಯುವ ಆಟಗಾರ ಸಾಯಿ ಸುದರ್ಶನ್ (96) ಚೆನ್ನೈ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು, ಇವರಿಗೆ ಸಾಥ್ ನೀಡಿದ ನಾಯಕ ಹಾರ್ದಿಕ್ ಪಾಂಡ್ಯ (21) ರನ್ ಗಳಿಸುವ ಮೂಲಕ ತಂಡವನ್ನು 214 ಗಡಿ ದಾಟಿಸಿದರು.

ಗುರಿ ಬೆನ್ನತ್ತಿದ್ದ ಸೂಪರ್ ಕಿಂಗ್ಸ್ ಗೆ ವರುಣ ಅಡ್ಡಿಯಾದ, 12 ಗಂಟೆಯವರೆಗೂ ಪಂದ್ಯವನ್ನು ನೆಡೆಸಲು ಸಾಧ್ಯವಾಗಲಿಲ್ಲ, ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ ಗಳಲ್ಲಿ ಸೂಪರ್ ಕಿಂಗ್ಸ್ ಗೆ 171ರನ್ ಗುರಿ ನೀಡಲಾಯಿತು.

ಸಿಎಸ್ ಕೆ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ (26) ಹಾಗೂ ಕಾನ್ವೆ (47) ಉತ್ತಮ ಅಡಿಪಾಯ ಹಾಕಿದರು, ನಂತರ ಬಂದ ರಹಾನೆ (27), ಶಿವಂ ದುಬೆ (37) , ರಾಯುಡು (19) ಹಾಗೂ ಮ್ಯಾಚ್ ವಿನ್ನರ್ ಆಲ್ ರೌಂಡರ್ ರವೀಂದ್ರ ಜಡೇಜಾ ಉಪಯುಕ್ತ (15) ರನ್ ಗಳಿಸುವ ಮೂಲಕ ಜಯವನ್ನು ತಂದುಕೊಟ್ಟರು.

ವಿಜೇತ ತಂಡಕ್ಕೆ ಟ್ರೋಫಿ, 20 ಕೋಟಿ ರೂಪಾಯಿ ಹಾಗೂ ರನ್ನರ್ ಆಫ್ ತಂಡ ಗುಜರಾತ್ ಟೈಟಾನ್ಸ್ ತಂಡಕ್ಕೆ 12.5 ಕೋಟಿ ರೂಪಾಯಿ ಬಹುಮಾನ ವಿತರಿಸಲಾಯಿತು, ಅದ್ಭುತ ಪ್ರದರ್ಶನ ನೀಡಿದ ಕಾನ್ವೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಶುಭ್ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಅಂಬಾಟಿ ರಾಯುಡು ಅವರಿಗೆ ಟ್ರೋಫಿ ನೀಡಿದ್ದು ವಿಶೇಷವಾಗಿತ್ತು ಹಾಗೂ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆಡುತ್ತೆನೆ ಎಂದು ಹೇಳುವ ಮೂಲಕ ಹಲವಾರು ಊಹಾಪೋಹಗಳಿಗೆ ಮಹೇಂದ್ರ ಸಿಂಗ್ ಧೋನಿ ತೆರೆ ಎಳೆದರು.

Leave a Reply

Your email address will not be published. Required fields are marked *