ನಿನ್ನೆ ಕೊಡಗಿನ ಸೂರ್ಲಬ್ಬಿಯಲ್ಲಿ ನಡೆದ ವಿದ್ಯಾರ್ಥಿನಿ ಮೀನಾ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಣ್ಣಂಡ ಪ್ರಕಾಶ್ ಎಂದು ಹೇಳಲಾಗಿದೆ.
ಮೀನಾ ಎಸ್ ಎಲ್ ಸಿಯಲ್ಲಿ ನಿನ್ನೆ ಹೊರ ಬಿದ್ದ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದಳು. ಇಲ್ಲಿನ ನಿವಾಸಿಯಾದ ಸುಬ್ರಮಣಿ ಎಂಬುವರ ಪುತ್ರಿಯಾದ ಈಕೆಗೆ ಮೂವರು ಅಕ್ಕಂದಿಯರು ಹಾಗೂ ಇಬ್ಬರು ಅಣ್ಣಂದಿರಿದ್ದು, ಈಕೆ ಕೊನೆವಳಾಗಿದ್ದಾಳೆ.
ನಿನ್ನೆ 32 ವರ್ಷ ಪ್ರಾಯದ ಮೊಣ್ಣಂಡ ಪ್ರಕಾಶ ಹಾಗೂ ಮೀನಾ ಅವರ ನಡುವೆ ಮದುವೆಯ ನಿಶ್ಚಿತಾರ್ಥ ಕಾರ್ಯ ನಡೆಯುವ ಸಂಬಂಧವಾಗಿ ಎಲ್ಲರೂ ಸೇರ್ಪಡಿಗೊಂಡಿದ್ದರು.
ಈ ಬಗ್ಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಹಾಯ ವಾಣಿಗೆ ದೂರು ಬಂದ ಅನ್ವಯ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಲಹೆ ಹಾಗೂ ಅರಿವು ಮೂಡಿಸಿ ಆಕೆಗೆ 18 ತುಂಬಿದ ನಂತರ ಮದುವೆ ಮಾಡಿಸುವಂತೆ ಸೂಚನೆ ನೀಡಿದರು.
ಈ ಸೂಚನೆಗೆ ಉಭಯ ಕಡೆಗಳು ಒಪ್ಪಿಕೊಂಡಿದ್ದರು. ಆದರೆ, ಸಂಜೆ 5.30 ರ ಸಮಯದಲ್ಲಿ ಪ್ರಕಾಶ್ ಆಕೆ ಮನೆಗೆ ತೆರಳಿ ಏಕಾಏಕಿ ತಂದೆ ಹಾಗೂ ತಾಯಿಗೆ ಹೊಡೆದು ಗಾಯಗೊಳಿಸಿ ಮೀನಳನ್ನು ಧರಧರನೇ 100 ಮೀಟರ್ ಎಳೆದೊಯ್ದು, ಆಕೆಯ ತಲೆಯನ್ನು ಕಡಿದು ತಲೆಯ ಭಾಗ ಸಹಿತ ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆತನನ್ನು ಇನ್ನಷ್ಟೇ ಬಂಧಿಸ ಬೇಕಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಮಡಿಕೇರಿ ಡಿವೈಎಸ್ಪಿ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಲಿದೆ.