ಬೇಡ ಬೇಡವೆಂದರು ಈ ಬಗ್ಗೆ ಬರೆಯಲೇಬೇಕೆನಿಸುತ್ತದೆ. ಏಕೆಂದರೆ ನನ್ನ ಒಂದು ಅಂದಾಜಿನ ಪ್ರಕಾರ ರಾಜ್ಯದ ಜನಸಂಖ್ಯೆಯ ಕನಿಷ್ಠ ಶೇಕಡ 25% ರಿಂದ 30% ರಷ್ಟು ಜನರಾದರೂ ಟಿವಿಯ ಬಿಗ್ ಬಾಸ್ ಎಂಬ ಈ ಮನರಂಜನಾ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೋಡುತ್ತಾರೆ, ಗಮನಿಸುತ್ತಾರೆ, ಚರ್ಚಿಸುತ್ತಾರೆ, ಅದರ ಬಗ್ಗೆ ತಿಳಿದಿರುತ್ತಾರೆ. ಇಂತಹ ಜನಪ್ರಿಯ ಕಾರ್ಯಕ್ರಮದ ಬಗ್ಗೆ ನಮ್ಮ ಪ್ರತಿಕ್ರಿಯೆಯು ಸಹ ಮುಖ್ಯವಾಗುತ್ತದೆ. ನಮಗೆ ಇಷ್ಟವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಜನರ ಆಕರ್ಷಣೆಗೆ ಒಳಗಾಗಿರುವ ಒಂದು ಟಿವಿ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಭಾವಿಸುತ್ತಾ, ಈ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿದೆ
ಒಟ್ಟಾರೆಯಾಗಿ ಈ ಮನರಂಜನ ಕಾರ್ಯಕ್ರಮ ಮಾಡಬಹುದಾದ ಪರಿಣಾಮದ ಬಗ್ಗೆ ಹೀಗೊಂದು ಅಭಿಪ್ರಾಯ……
ಬಿಗ್ ಬಾಸ್ ಎಂದರೇ……
ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್…….
ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್…….
ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್……..
ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್…….
ನಿಮ್ಮ ಕರುಣೆ ಹೃದಯವಂತಿಕೆಯ ಪ್ರದರ್ಶನವೇ ಬಿಗ್ ಬಾಸ್…..
ನಿಮ್ಮ ಪ್ರೀತಿ ಹಂಚಿಕೆಯ ಪ್ರದರ್ಶನವೇ ಬಿಗ್ ಬಾಸ್……
ನಿಮ್ಮ ವ್ಯಕ್ತಿತ್ವದ ಹೊರಸೂಸುವಿಕೆಯ ಪ್ರದರ್ಶನವೇ ಬಿಗ್ ಬಾಸ್…..
ನಿಮ್ಮ ದಿನಚರಿ ಮಾದರಿಯ ಪ್ರದರ್ಶನವೇ ಬಿಗ್ ಬಾಸ್…..
ನಿಮ್ಮ ಪ್ರತಿಭೆಯ ಪ್ರದರ್ಶನವೇ ಬಿಗ್ ಬಾಸ್…….
ನಿಮ್ಮ ಕಲೆಯ ಪ್ರದರ್ಶನವೇ ಬಿಗ್ ಬಾಸ್……
ಕಠಿಣ ಸಂದರ್ಭದಲ್ಲಿ ನಿಮ್ಮ ಆದರ್ಶ ನಡವಳಿಕೆಯ ಪ್ರದರ್ಶನವೇ ಬಿಗ್ ಬಾಸ್…..
ನಿಮ್ಮ ಮಾತು ಭಾಷೆಯ ಉತ್ಕೃಷ್ಟತೆಯ ಪ್ರದರ್ಶನವೇ ಬಿಗ್ ಬಾಸ್….
ನಿಮ್ಮ ಗೆಳೆತನದ ಪ್ರಾಮಾಣಿಕತೆಯ ಪ್ರದರ್ಶನವೇ ಬಿಗ್ ಬಾಸ್…..
ನಿಮ್ಮ ಅನುಭವದ ಅರಿವಿನ ಮುಕ್ತ – ಮುಗ್ದ ಪ್ರದರ್ಶನವೇ ಬಿಗ್ ಬಾಸ್….
ನಿಮ್ಮ ಮಾನವೀಯ ಮೌಲ್ಯಗಳ ಪ್ರದರ್ಶನವೇ ಬಿಗ್ ಬಾಸ್….
ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಕಿರುತೆರೆಯ ಮನರಂಜನಾ ಕಾರ್ಯಕ್ರಮ ಬಿಗ್ ಬಾಸ್…..
ಅದರಲ್ಲಿ ಭಾಗವಹಿಸುವವರಿಗೆ ಜನಪ್ರಿಯತೆ, ನೋಡುವವರಿಗೆ ಮನರಂಜನೆ, ಕಾರ್ಯಕ್ರಮ ನಿರ್ಮಿಸುವವರಿಗೆ ಸಾಕಷ್ಟು ಹಣ, ಅದರಲ್ಲಿ ಜಾಹೀರಾತು ಪ್ರಸಾರ ಮಾಡುವವರಿಗೆ ಒಳ್ಳೆಯ ಪ್ರಚಾರ ಹೀಗೆ ಎಲ್ಲವೂ ಅದರಿಂದ ಸಿಗುತ್ತಿದೆ…..
ಆದರೆ ಸಮಾಜಕ್ಕೆ ಮುಖ್ಯವಾಗಿ ಯುವ ಸಮೂಹಕ್ಕೆ ಏನು ಸಿಗುತ್ತಿದೆ ಎಂದು ಯೋಚಿಸಿದಾಗ….
ಕೆಲವು ಪ್ರೀತಿಯ, ಹಲವು ಭಾವನಾತ್ಮಕ, ಸ್ವಲ್ಪ ಮನರಂಜನಾ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಸಾಮಾಜಿಕ, ನೈತಿಕ ಮತ್ತು ಮಾನವೀಯ ಮೌಲ್ಯಗಳ ವಿರುದ್ಧ ಮಾತು ಮತ್ತು ವರ್ತನೆಗಳೇ ಆ ಕಾರ್ಯಕ್ರಮದಲ್ಲಿ ಹೆಚ್ಚಾಗಿರುತ್ತದೆ. ಅನಾವಶ್ಯಕ ಕೋಪ, ದ್ವೇಷ, ಅಸೂಯೆ, ಸಣ್ಣತನ, ಅಜ್ಞಾನ, ಮೌಡ್ಯ, ಸ್ವೇಚ್ಛೆ, ಅಹಂಕಾರ ಮುಂತಾದ ಅಂಶಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಹೆಚ್ಚು ಹುಚ್ಚುತನ ಪ್ರದರ್ಶಿಸುವವರೇ ಜನಪ್ರಿಯತೆ ಪಡೆಯುತ್ತಾರೆ.
ಒಬ್ಬ ಸಾಮಾನ್ಯ ವ್ಯಕ್ತಿಗಿಂತ ಕಳಪೆ ಮಟ್ಟದ ಅಸಹ್ಯಕರ ವರ್ತನೆ ಪ್ರದರ್ಶಿಸುತ್ತಾರೆ. ತಾಳ್ಮೆ ಎಂಬುದು, ವಿವೇಚನೆ ಎಂಬುದು ಇಲ್ಲವೇ ಇಲ್ಲ. ಕಾರ್ಯಕ್ರಮ ಯಾವುದೇ ಆಗಿರಲಿ ಅದು ಮನರಂಜನೆಯೋ, ಶೈಕ್ಷಣಿಕವೋ, ರಿಯಾಲಿಟಿ ಶೋಗಳೋ ಏನೇ ಇರಲಿ ನಾಗರಿಕ ಪ್ರಜ್ಞೆ ಮತ್ತು ವೈಚಾರಿಕ ಚಿಂತನೆ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಅದನ್ನು ಹೊರತುಪಡಿಸಿ ಏನನ್ನೂ ಮಾಡಬಾರದು. ಅದು ಸಮಾಜ ವಿರೋಧಿ ನಿಲುವು. ಮನರಂಜನೆಯ ಹೆಸರಿನಲ್ಲಿ ಮಾನವೀಯ ಮೌಲ್ಯಗಳ ಅಪಮೌಲ್ಯ ಖಂಡಿತ ಸ್ವೀಕಾರಾರ್ಹವಲ್ಲ. ಮುಗ್ಧ ಜನರ ಶೋಷಣೆ ಯಾವ ರೀತಿಯಲ್ಲಿ ನಡೆದರೂ ಅದನ್ನು ಖಂಡಿಸಬೇಕು.
ಮನುಷ್ಯ ಒಂದು ಪ್ರಾಣಿ. ಅವನನ್ನು ಸಹ ಹಣ ಪ್ರಚಾರ ಮುಂತಾದ ಆಮಿಷಗಳಿಂದ ಆಕರ್ಷಿಸಿ ಒಂದು ಬೋನಿನಲ್ಲಿ ಕೂಡಿ ಹಾಕಿ ಪ್ರಾಣಿಯಂತೆ ಆಡಿಸಿ ಜನರಿಗೆ ಮನರಂಜನೆ ನೀಡಿ ಹಣ ಮಾಡಬಹುದು. ಹೆಚ್ಚು ಕಡಿಮೆ ಒಂದು ಸರ್ಕಸ್ ಕಂಪನಿಯಂತೆ. ಅದನ್ನು ಟಿವಿ ಮಾಧ್ಯಮ ಮಾಡುತ್ತಿದೆ. ಅದೇ ಬಿಗ್ ಬಾಸ್……….
ಹಾಡು, ಕುಣಿತ, ಪ್ರಶ್ನೋತ್ತರ ಮುಂತಾದ ಪ್ರತಿಭಾ ಪ್ರದರ್ಶನದ ರಿಯಾಲಿಟಿ ಶೋನಲ್ಲಿ ಇರುವ ಸಹಜತೆ ಇಲ್ಲಿ ಇರುವುದಿಲ್ಲ. ಉದ್ದೇಶ ಪೂರ್ವಕವಾಗಿ ಒತ್ತಡದಿಂದ ಅಲ್ಲಿನ ಸ್ಪರ್ಧಿಗಳನ್ನು ಒಬ್ಬರು ನಿಯಂತ್ರಿಸುತ್ತಾರೆ ಮತ್ತು ಪ್ರಚೋದಿಸುತ್ತಾರೆ. ಅದನ್ನು ಹೀಗೆ ಹೇಳಬಹುದು….
ಬೋನಿನಲ್ಲಿ ಕೋತಿಗಳ ಕಲರವ,
ಕಪಿ ಚೇಷ್ಟೆಗಳು,
ಧ್ವನಿಯ ಮುಖಾಂತರ ಆಡಿಸುವ ರಿಂಗ್ ಮಾಸ್ಟರ್ ನ ಕುಚೇಷ್ಟೆ,….
ಎಲ್ಲಾರು ಮಾಡುವುದು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ, ಹೆಸರ ಮೂಟೆಗಾಗಿ,
ಆದರೆ ಹೇಳುವುದು ಮಾತ್ರ ಮನರಂಜನೆಗಾಗಿ, ಅಭಿಮಾನಿಗಳಿಗಾಗಿ,….
ಮಾಡುವುದು ವಿಕೃತ ಮನಸ್ಸಿನ ಅನಾವರಣ,
ಹೇಳುವುದು ಮಾನಸಿಕ ಗಟ್ಟಿತನದ ಪ್ರದರ್ಶನ,…..
ಅಸಹನೀಯ —ನಾಟಕೀಯ —-ವರ್ತನೆ,
ನಾನಿರುವುದೇ ಹೀಗೆ ಎಂಬ ಕಪಟ ಸಮರ್ಥನೆ,….
ಇದು ಅನುಕರಣೀಯವೋ, ಅನುಸರಣೀಯವೋ,
ನಗಬೇಕೋ, ಅಳಬೇಕೋ,
ದ್ವಂದ್ವ ಬಹುಜನರದ್ದು,….
ಕಾರ್ಯಕ್ರಮಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೂ ಇದೆ. ನೋಡುವ ಅಥವಾ ನೋಡದಿರುವ ಸ್ವಾತಂತ್ರ್ಯ ನಮಗೂ ಇದೆ,……
ಕೋಪ ನಿಯಂತ್ರಿಸಲು – ನನ್ನನ್ನು ನಾನು ಹುಡುಕಲು ಇಲ್ಲಿಗೆ ಬಂದೆ ಎನ್ನುವರು,
ಹಾಗಾದರೆ ಇಷ್ಟು ದಿನದ ಹೊರಗಿನ ಬದುಕು ಅಸಹಜವೇ,…..
ಪ್ರಶ್ನೆಗಳು ಏಳುತ್ತಲೇ ಇರುತ್ತವೆ,
ಉತ್ತರವೂ ನಮಗೆ ತೋಚಿದಂತೆ,
ಸಿನಿಮಾ ಧಾರವಾಹಿಗಳ ಕಥೆಯೂ ಇದೇ ಅಲ್ಲವೇ, ಇಲ್ಲೊಂದಿಷ್ಟು ಹೆಚ್ಚು ಅತಿರೇಕ,
ಸಹಜತೆಯಲ್ಲೊಂದು ಅಸಹಜತೆ,
ನಿಯಂತ್ರಣದಲ್ಲೊಂದು ಅಸಹಾಯಕತೆ,
ಸತ್ಯದಲ್ಲೊಂದು ಮಿಥ್ಯೆ,
ಅರಿವಿನಲ್ಲೊಂದು ನಿಗೂಡತೆ,…….
ಈ ಬಗೆಗಿನ ತೀರ್ಮಾನ ನಿಮ್ಮ ವಿವೇಚನೆಗೆ ಬಿಡುತ್ತಾ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್.ಕೆ