ಹೆಚ್ಚು ಶಬ್ಧ ಹಾಗೂ ಮಾಲಿನ್ಯ ಉಂಟು ಮಾಡುವ ಪಟಾಕಿಗಳ ನಿಷೇಧ: ಹಬ್ಬದ ದಿನದಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧ- ಜಿಲ್ಲಾಧಿಕಾರಿ ಆದೇಶ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಮತ್ತು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್ ಅವರು ತಿಳಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರು ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದು.

ದೀಪಾವಳಿ ಹಬ್ಬದ ದಿನದಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧ ಉಂಟು ಮಾಡುವ ನಿಷೇಧಿತ ಪಟಾಕಿಗಳನ್ನು ಬಳಸಬಾರದು. ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಲು ತಿಳಿಸಲಾಗಿದೆ.

ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯಗಳು ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಆಚರಿಸಲು ತಿಳಿಸಲಾಗಿದೆ. ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಉಪಯೋಗಿಸದೆ ದೀಪದ ಹಬ್ಬವನ್ನಾಗಿ ಆಚರಿಸಲು ಕೋರಲಾಗಿದೆ. ಹಬ್ಬದ ಸಮಯದಲ್ಲಿ ಸಾರ್ವಜನಿಕರು ಸಹಕರಿಸಿ ಎಂದು ಜಿಲ್ಲಾಧಿಕಾರಿಗಳು ಡಾ.ಶಿವಶಂಕರ‌.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *