ನಿವೇಶನ ರಹಿತರಿಗೆ ಆಶ್ರಯ‌ ಯೋಜನೆಯಡಿ‌ ನಿವೇಶನಗಳ ಹಂಚಿಕೆಗೆ ಆಗ್ರಹ

ನಿವೇಶನ‌ ರಹಿತರಿಗೆ ಆಶ್ರಯ‌ ಯೋಜನೆಯಡಿ‌ ನಿವೇಶನಗಳ ಹಂಚಿಕೆ ಹಾಗೂ ಗೋಮಾಳ ಭೂಮಿ ಒತ್ತುವರಿ ತೆರವಿಗೆ ಆಗ್ರಹಿಸಿ ತಾಲೂಕಿನ ಮೇಲಿನ ಜೂಗಾನಹಳ್ಳಿ, ಗುಂಜೂರು‌, ಕೆಳಗಿನಜೂಗಾನಹಳ್ಳಿ, ಮಾಕಳಿ ಗ್ರಾಮಗಳ ನಿವೇಶನರಹಿತರು ತಹಶೀಲ್ದಾರ್‌ ಕಚೇರಿ‌ ಬಳಿ ಧರಣಿ‌ ನಡೆಸಿದರು.

ಮೇಲಿನಜೂಗಾನಹಳ್ಳಿ(ಎಸ್.ಎಸ್.ಘಾಟಿ) ಗ್ರಾಮ‌ ಪಂಚಾಯ್ತಿ ವ್ಯಾಪ್ತಿಯ ಮೇಲಿನ ಜೂಗಾನಹಳ್ಳಿ ಸರ್ವೇ ನಂ.33 ರಲ್ಲಿ ಎಂಟು ಎಕರೆ ಗೋಮಾಳ‌ ಜಮೀನಿದ್ದು, ನಿವೇಶನರಹಿತರಿಗೆ ಹಂಚಿಕೆ‌ ಮಾಡಬೇಕು. ಇದಕ್ಕೆ ಹೊಂದಿಕೊಂಡ‌ ಸರ್ವೇ ನಂಬರ್ ಜಾಗದಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯಿದ್ದು, ಬಲಾಢ್ಯರ ಕಣ್ಣು ಬಿದ್ದಿದೆ.

ಖಾಸಗಿ ರೆಸಾರ್ಟ್‌ ಮಾಲೀಕರೊಬ್ಬರು ಈಗಾಗಲೇ 30 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ‌ ಅಧಿಕಾರಿಗಳು ತಕ್ಷಣವೇ ಒತ್ತುವರಿ ತೆರವುಗೊಳಿಸಿ, ನಿವೇಶನರಹಿತರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಭೂಮಿಯಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಗುರುತಿಸಿದ‌ ಜಮೀನು ಎಂಬ ನಾಮಫಲಕವನ್ನು ನಾಲ್ಕೂ ಗ್ರಾಮಸ್ಥರು ಹಾಕಿದ್ದು, ಪ್ರಭಾವಿಗಳ ಒತ್ತಡಕ್ಕೆ‌ ಮಣಿದ ಅಧಿಕಾರಿಗಳು ನಾಮಫಲಕ ತೆರವಿಗೆ ಮುಂದಾಗಿದ್ದಾರೆ. ಹಾಗಾಗಿ ತಕ್ಷಣವೇ ನಿವೇಶನ ಹಂಚಿಕೆ‌ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸರ್ಕಾರ‌ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ತಹಶೀಲ್ದಾರ್ ಮೋಹನಕುಮಾರಿ ಅವರು ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಶೀಘ್ರ‌ ನಿವೇಶನ ಹಂಚುವ ಭರವಸೆ ನೀಡಿದರು.

ಈ‌‌ ಸಂದರ್ಭದಲ್ಲಿ ವಕೀಲ ಪ್ರತಾಪ್ ಆರ್, ಕರ್ನಾಟಕ ರಾಷ್ಟ್ರ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್, ವೆಂಕಟೇಶ್, ಮಾಲಾಶ್ರೀ, ಗೋಪಾಲಕೃಷ್ಣ,ಶಿವಕುಮಾರ್ ಇತರರು‌ ಇದ್ದರು.

ಆಶ್ರಯ ನಿವೇಶನಗಳಿಗೆ 150 ಎಕರೆ ಗುರುತು

ತಾಲೂಕಿನಲ್ಲಿ‌ 150 ಎಕರೆ ಸರ್ಕಾರಿ ಭೂಮಿಯನ್ನು ಆಶ್ರಯ ಯೋಜನೆಯಡಿ‌ ನಿವೇಶನ ಹಂಚಿಕೆಗೆ ಮಿಸಲಿಡಲಾಗಿದೆ ಎಂದು ತಹಶೀಲ್ದಾರ್‌ ಮೋಹನಕುಮಾರಿ ಹೇಳಿದರು.

ಮಧುರೆ ಹೋಬಳಿಯಲ್ಲಿ 50 ಎಕರೆ, ತೂಬಗೆರೆ ಹೋಬಳಿಯಲ್ಲಿ 35 ಎಕರೆ ಸೇರಿದಂತೆ ಎಲ್ಲ ಹೋಬಳಿಗಳಲ್ಲಿ ಜಾಗ ಗುರುತಿಸಲಾಗಿದೆ.

ಗ್ರಾಮ ಪಂಚಾಯ್ತಿವಾರು ನಿವೇಶನರಹಿತರ ಮಾಹಿತಿ ಪಡೆದು ನಾಲ್ಕು‌ ದಿನಗಳಲ್ಲಿ ಸಲ್ಲಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ‌ ಸೂಚಿಸಲಾಗಿದೆ‌. ವರದಿ ಬಂದ‌ ಕೂಡಲೇ ಸ್ಕೆಚ್ ಮಾಡಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಶ್ರಯ ಮನೆ‌ ಮಂಜೂರಾತಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರೋಧವಿಲ್ಲ. ಆದರೆ ಭೂಮಿ‌ ಮಂಜೂರು ಮಾಡುವ ಅಧಿಕಾರ‌ ಜಿಲ್ಲಾಧಿಕಾರಿಗಳಿಗಿದೆ. ನಾವು ಪ್ರಸ್ತಾವ ಕಳಿಸಬೇಕು. ಅದಕ್ಕಾಗಿ ನಿವೇಶನರಹಿತರ ಪಟ್ಟಿ, ಲಭ್ಯವಿರುವ ಭೂಮಿ, ಫಲಾನುಭವಿಗಳ ಪಟ್ಟಿ ತರಿಸಿಕೊಂಡು ಪ್ರಸ್ತಾವ ಸಲ್ಲಿಸಲಾಗುವುದು‌ ಎಂದು ಹೇಳಿದರು.

ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಗೋಮಾಳ‌ ಒತ್ತುವರಿಯಾಗಿದ್ದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬಗರ್ ಹುಕುಂನಲ್ಲಿ ಫಾರಂ 57ರಡಿ ಅರ್ಜಿ ಹಾಕಿದ್ದರೆ‌ ಮಾತ್ರ ಸಾಗುವಳಿಗೆ‌ ಅವಕಾಶ ನೀಡಬಹುದು ಎಂದರು.

Leave a Reply

Your email address will not be published. Required fields are marked *