ವಿಶ್ವ ಪ್ರಸಿದ್ಧ ಮೈಸೂರು ದಸರಾ ವೈಭವದಿಂದ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಮಂಗಳವಾರ ಸಂಜೆ 4:40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಬಹಳ ಗಾಂಭೀರ್ಯದಿಂದ ಹೆಜ್ಜೆ ಹಾಕಲಾಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದವು.
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗಿತು. ಈ ವೇಳೆ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿದ್ದವು.
ವಿಶ್ವ ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡ ಭಾರೀ ಜನಸ್ತೋಮ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.