ತೂಬಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ, ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ವಿದಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು.
ತೂಬಗೆರೆ ಸರ್ಕಾರಿ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಖೋ-ಖೋ ತಂಡ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಆಯ್ಕೆಯಾದ 25 ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕ್ರೀಡಾ ಸಮವಸ್ತ್ರ ಕೊಡುಗೆಯಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಗಂಗಾಧರ್, ಜಿಲ್ಲಾ ಮಟ್ಟಕ್ಕೆ ನಮ್ಮೂರಿನ ಶಾಲಾ ವಿದ್ಯಾರ್ಥಿಗಳು ಆಯ್ಕೆ ಆಗಿರುವುದು ತುಂಬಾ ಸಂತೋಷವಾಗಿದೆ ತಾಲೂಕು ಮಟ್ಟದಲ್ಲಿ ಅತ್ಯಂತ ಬಲಾಢ್ಯ ತಂಡಗಳನ್ನು ಎದುರಿಸಿ ಜಯಶಾಲಿಯಾಗಿರುವುದು ಸಂತಸ ತಂದಿದೆ ಇಡೀ ಶಾಲಾ ಮಕ್ಕಳಿಗೆ ಸಿಹಿ ಹಂಚುತ್ತಿದ್ದೇವೆ ಎಂದರು.
ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, ಮಕ್ಕಳ ಅಮೋಘ ಸಾಧನೆಯಿಂದ ಶಾಲೆಯ ಕೀರ್ತಿ ಹೆಚ್ಚಾಗಿದೆ. ಈ ಕ್ರೀಡಾಪಟುಗಳಿಗೆ ನಮ್ಮ ಊರಿನ ಗ್ರಾಮಸ್ಥರ ಬೆಂಬಲ ಸದಾ ಇರುತ್ತೆ. ಮುಂದಿನ ದಿನಗಳಲ್ಲಿ ಯಶಸ್ವಿ ಪ್ರದರ್ಶನದೊಂದಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದರು.
ಮುಖ್ಯ ಶಿಕ್ಷಕ ಗಿರೀಶ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಗ್ರಾಮಸ್ಥರು ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದಿದ್ದರಿಂದ, ಗ್ರಾಮದ ಯುವಕರು ತರಬೇತಿ ನೀಡಿ ಈ ಸಾಧನೆ ಮಾಡಲು ಸಹಾಯ ಮಾಡಿದ್ದಾರೆ. ಅವರಿಗೆ ಶಾಲೆಯ ಪರವಾಗಿ ವಂದನೆಗಳನ್ನು ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತ್ಯನಾರಾಯಣಪ್ಪ, ವೆಂಕಟೇಶ್, ನಿವೃತ್ತ ಯೋಧ ಅನಂತ ರಾಜಗೋಪಾಲ್, ತರಬೇತುದಾರ ವಿನೋದ್, ಗ್ರಾಮಸ್ಥರಾದ ನರಸಿಂಹಮೂರ್ತಿ. ಮೂರ್ತಿ, ಕಿರಣ್, ಸುನಿಲ್, ಮಂಜುನಾಥ್, ಶಾಲೆಯ ಸಹ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.