ವಾಣಿಜ್ಯ ಕಟ್ಟಡಗಳ ತೆರಿಗೆ ವಂಚಕರಿಗೆ ಬಿಸಿ; ತೆರಿಗೆ ವಸೂಲಾತಿಗೆ ಪೌರಾಯುಕ್ತ ಶಿವಶಂಕರ್ ದಿಢೀರ್ ಕಾರ್ಯಾಚರಣೆ

ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ತೆರಿಗೆ ವಸೂಲಾತಿಯ ಕುರಿತು ನಗರಸಭೆ ಪೌರಾಯುಕ್ತ ಶಿವಶಂಕರ್ ಹಾಗೂ ಕಂದಾಯ ವಿಭಾಗದ ಸಿಬ್ಬಂದಿಗಳು ಖುದ್ದು ಕಟ್ಟಡಗಳ ಅಳತೆ ಪಡೆದು, ಬಾಕಿ ತೆರಿಗೆ ಮೊತ್ತಗಳ ಪರಿಶೀಲನೆ ಮಾಡಿದರು.

ಇದೇ ವೇಳೆ ತೆರಿಗೆ ಪಾವತಿಸಿದ್ದಲ್ಲಿ ವ್ಯತ್ಯಾಸದ ತೆರಿಗೆಯನ್ನು ಪಾವತಿಸಲು ಹಾಗೂ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ಮಾಲೀಕರುಗಳಿಗೆ ತೆರಿಗೆ ಮೊತ್ತವನ್ನು ಶೀಘ್ರವಾಗಿ ಪಾವತಿ ಮಾಡುವಂತೆ ನೋಟಿಸ್ ನೀಡಲಾಯಿತು. ನಿಗದಿತ ಅವಧಿಯಲ್ಲಿ ನಗರಸಭೆಗೆ ಪಾವತಿಸಬೇಕಾದ ತೆರಿಗೆಗಳನ್ನು ಪಾವತಿಸಿ ಸರ್ಕಾರದಿಂದ ನೀಡಲಾಗುವ ತೆರಿಗೆ ರಿಯಾಯಿತಿಯ ಲಾಭಗಳನ್ನು ಪಡೆದುಕೊಳ್ಳಲು ಮನವರಿಕೆ ಮಾಡಲಾಯಿತು.

ಸ್ವತ್ತಿನ ಎಲ್ಲ ತೆರಿಗೆಗಳನ್ನು ಪ್ರತಿ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ ಪಾವತಿಸಿದಲ್ಲಿ ಒಟ್ಟು ತೆರಿಗೆಯ ಮೇಲೆ ಶೇಕಡಾ ಐದರಷ್ಟು ರಿಯಾಯಿತಿ ಇರುವ ಬಗ್ಗೆ ಹಾಗೂ ಅದೇ ಆರ್ಥಿಕ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ತೆರಿಗೆ ಪಾವತಿಸಿದಲ್ಲಿ ಯಾವುದೇ ದಂಡರಹಿತ ತೆರಿಗೆ ಪಾವತಿಸಲು ಅವಕಾಶ ಇರುವ ಬಗ್ಗೆ ತಿಳುವಳಿಕೆ ನೀಡಲಾಯಿತು. ನಿಗದಿತ ಅವಧಿಯಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಸ್ವತ್ತುಗಳ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಇನ್ನುಳಿದ ತೆರಿಗೆಗಳನ್ನು ನಗರಸಭೆಗೆ ಪಾವತಿಸಿ ರಶೀದಿ ಪಡೆದುಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಕಮರ್ಷಿಯಲ್ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಾರ್ವಜನಿಕರಿಗೆ ಅಂಗಡಿಗಳ ಬಳಿಗೆ ತೆರಳಿ ಬಾಕಿ ಮೊತ್ತಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ವರ್ಷಾನುಗಟ್ಟಲೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದೇವೆ. ಅಲ್ಲದೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ನಮ್ಮ ಕಂದಾಯ ಇಲಾಖಾ ಸಿಬ್ಬಂದಿ ಅರಿವು ಮೂಡಿಸಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರತಿಯೊಬ್ಬರು ಪಾವತಿಸಿ ನಗರಸಭೆಗೆ ಸ್ಪಂದಿಸಬೇಕಾಗಿದೆ ಎಂದು ಪೌರಾಯುಕ್ತ ಶಿವಶಂಕರ್ ಸೂಚಿಸಿದರು.

Leave a Reply

Your email address will not be published. Required fields are marked *