ಸಿ.ಎಸ್. ಆರ್ ಅನುದಾನದಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನದಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು, ಆರಂಭಿಕ ಹಂತದಲ್ಲಿ ದೇವನಹಳ್ಳಿ ತಾಲ್ಲೂಕಿನ 05 ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಅಕ್ಟೋಬರ್ 02 ರಂದು ಚಾಲನೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಸಿ.ಎಸ್. ಅರ್ ಅನುದಾನದಡಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಜಿಲ್ಲೆಯ ಕೈಗಾರಿಕೆಗಳು, ವಿವಿಧ ಕಂಪನಿಗಳ ಸಹಯೋಗದಿಂದ ಸಿ.ಎಸ್. ಆರ್ ನಿಧಿಯಡಿಯಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಲಾಗುವುದು. ಅಕ್ಟೋಬರ್ 02 ರಂದು ಗಾಂಧಿ ಜಯಂತಿ ದಿನ ದೇವನಹಳ್ಳಿ ತಾಲ್ಲೂಕಿನ 05 ಸರ್ಕಾರಿ ಶಾಲೆಗಳ ನವೀಕರಣಕ್ಕೆ ಚಾಲನೆ ನೀಡಲಾಗುವುದು.

ಮುಂದಿನ ದಿನಗಳಲ್ಲಿ ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕಿನ ಕೈಗಾರಿಕೆಗಳು ಹಾಗೂ ಕಂಪನಿಗಳ ಸಭೆ ನಡೆಸಿ ಸಿ.ಎಸ್‌.ಆರ್ ಅನುದಾನದಡಿಯಲ್ಲಿ ಆಯಾ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರು ಮಾತನಾಡಿ ಬ್ರಿಗೇಡ್ ಡೆವಲಪರ್ಸ್, ಪ್ರೆಸ್ಟೀಜ್ ಕಂಪನಿ,ಚಾಣಕ್ಯ ಯುನಿವರ್ಸಿಟಿ, ಎಕ್ಸೈಡ್ ಕಂಪನಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಗಳ ಅಂದಾಜು 10 ಕೋಟಿ ಸಿ.ಎಸ್.ಆರ್ ನಿಧಿಯಲ್ಲಿ 05 ಶಾಲೆಗಳ ನವೀಕರಣಕ್ಕೆ ಅಕ್ಟೋಬರ್ 02 ರಂದು ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಶಾಲೆ ಆವರಣದಲ್ಲಿ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ ಅವರು ಮಾತನಾಡಿ ಜಿಲ್ಲೆಯಲ್ಲಿ 1114 ಶಾಲೆಗಳಿದ್ದು, 115 ಶಿಥಿಲಗೊಂಡಿವೆ, 247 ಹೊಸ ಶಾಲೆಗಳ ನಿರ್ಮಾಣವಾಗಬೇಕು, ಇರುವ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವುದು , ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಂದಾಜು 70 ಕೋಟಿ ಅವಶ್ಯಕತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *