ಟಿ.ಬಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಆಫ್ : ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು: ನಾಲ್ಕು ಕಡೆಯಿಂದ ಏಕಕಾಲದಲ್ಲಿ ನುಗ್ಗುವ ವಾಹನಗಳು: ಅಪಘಾತ ಭೀತಿಯಲ್ಲಿ ಸವಾರರು

ನಗರದಲ್ಲಿ ಸಂಚಾರ ದಟ್ಟಣೆ, ಅಪಘಾತ ನಿಯಂತ್ರಿಸುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ (ಟಿ.ಬಿ) ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನ ಅಳವಡಿಕೆ ಮಾಡಲಾಗಿದೆ. ಈಗ ಅವು ತಾಂತ್ರಿಕ ಸಮಸ್ಯೆಯಿಂದ ಆಫ್ ಆಗಿ ತಿಂಗಳುಗಳೇ ಕಳೆದಿವೆ. ಸಿಗ್ನಲ್ ಬಲ್ಬ್ ಗಳು ಬೆಳಗದ ಕಾರಣ ವೃತ್ತದ ನಾಲ್ಕು‌ ದಿಕ್ಕಿನಿಂದ ತಾಮುಂದು, ನಾಮುಂದು ಎಂದು ವಾಹನಗಳನ್ನ ಚಲಾಯಿಸುತ್ತಿರುವ ವಾಹನ ಸವಾರರು. ಇದರಿಂದ ಅಪಘಾತದ ಭಯದಲ್ಲಿ ಜೀವ ಅಂಗೈಯಲ್ಲಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೂಪುರ, ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಸಂಪರ್ಕಿಸುವ ವೃತ್ತ‌ ಇದಾಗಿದ್ದು, ನಿತ್ಯ ಇಲ್ಲಿಂದ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ವಾಹನ ದಟ್ಟಣೆ ನಿಯಂತ್ರಿಸಲು ಇತ್ತೀಚೆಗೆ ಟ್ರಾಫಿಕ್ ಬಲ್ಬ್ ಗಳನ್ನ ಅಳವಡಿಸಲಾಗಿತ್ತು. ಈಗ ದಿಢೀರನೆ ತಟಸ್ಥವಾಗಿವೆ. ಕೇವಲ ನಾಮಕಾವಸ್ಥೆಗೆ ಮಾತ್ರ ಸಿಗ್ನಲ್ ದೀಪಗಳನ್ನ ಅಳವಡಿಸಲಾಗಿದಿಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಟ್ರಾಫಿಕ್‌ ಸಿಗ್ನಲ್ ಬೆಳಗದ ಕಾರಣ ಸಾಕಷ್ಟು ರಸ್ತೆ ನಿಯಮಗಳು ಉಲ್ಲಂಘನೆಯಾಗುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಸಾಕಷ್ಟು ಸಾವು-ನೋವು ಅನುಭವಿಸುತ್ತಿದ್ದಾರೆ.

ಅಪಘಾತ ತಡೆ, ವಾಹನ ದಟ್ಟಣೆ ನಿಯಂತ್ರಣ ಸಲುವಾಗಿ ಇತ್ತೀಚೆಗೆ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಅಂಗಡಿಗಳನ್ನು ಭಾರೀ ವಿರೋಧದ ನಡುವೆಯೂ ನಗರಸಭೆ ವತಿಯಿಂದ ತೆರವುಗೊಳಿಸಲಾಗಿತ್ತು. ಅಪಘಾತ, ವಾಹನ ದಟ್ಟಣೆಗೆ ಕಾರಣ ಕೇವಲ ಬೀದಿಬದಿ ಅಂಗಡಿಗಳು ಎಂದು ದೂರಿ ತೆರವು ಮಾಡಿ ಬೀದಿಬದಿ ವ್ಯಾಪಾರಸ್ಥರನ್ನ ಬೀದಿಗೆ ತರಲಾಗಿದೆ.

ಅಪಘಾತ, ವಾಹನ ದಟ್ಟಣೆ ನಿಯಂತ್ರಣ ಮಾಡಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಲು ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ಪೊಲೀಸರ ಪಾತ್ರನೂ ಬಹಳ ಮುಖ್ಯವಾಗಿರುತ್ತದೆ. ಈಗ ನಗರದಲ್ಲಿ ಇವು ಯಾವುದು ಇಲ್ಲ. ಕೇವಲ ರಸ್ತೆಬದಿ ಅಂಗಡಿಗಳನ್ನ ತೆರವುಗೊಳಿಸಿ ಅಪಘಾತ, ವಾಹನ ದಟ್ಟಣೆ ನಿಯಂತ್ರಣ ಮಾಡಿದ್ದೇವೆ ಎಂದು ಕೈಕಟ್ಟಿ ಕುಳಿತಿರುವ ಸಂಬಂಧಪಟ್ಟ ಇಲಾಖೆಗಳು.

ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾತ್ರ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಅದನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಬೇಜವಾಬ್ಧಾರಿ ಮೆರೆಯುತ್ತಿರುವ ಅಧಿಕಾರಿಗಳು.

ಸಂಬಂಧಪಟ್ಟ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕರ ಸಾವು-ನೋವು ಆಗುವ ಮೊದಲು ಟ್ರಾಫಿಕ್ ಸಿಗ್ನಲ್ ಗಳನ್ನ ದುರಸ್ತಿ ಮಾಡಿ ರಸ್ತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *