ತನ್ನ ಗಂಡನ ಮೇಲೆ ಹಲ್ಲೆ ನಡೆಸುವಂತೆ ಪ್ರಿಯಕರನಿಗೆ ಮಚ್ಚು ಕೊಟ್ಟು ಕಳುಹಿಸಿದ ಮಹಿಳೆ?. ಪ್ರಿಯತಮೆ ಮಾತಿಗೆ ರೊಚ್ಚಿಗೆದ್ದು ಪ್ರಿಯತಮೆ ಗಂಡನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೇವನಹಳ್ಳಿ ತಾಲೂಕಿನ ದೊಡ್ಡಚಿಮ್ಮನಹಳ್ಳಿ ಗ್ರಾಮದ ಅಶೋಕ್ ಎಂಬಾತನಿಗೆ ವಿಶ್ವನಾಥಪುರದ ವಾಸಿ ಮಧನ್ ಎಂಬುವನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಾಳಿ ಕಟ್ಟಿದ ಅಶೋಕ್ ಎಂಬಾತನಿಂದ ದೂರವಾಗಿ ಮಧನ್ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳಸಿಕೊಂಡಿದ್ದ ಅಶೋಕ್ ಮಡದಿ ಮೇಘಾ, ಗಂಡನಿಂದ ದೂರವಾಗಿ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಪ್ರಿಯತಮ ಮಧನ್ ಜೊತೆ ವಾಸವಿದ್ದರು. ಅಶೋಕ್ ಹಾಗೂ ಮೇಘಾ ದಂಪತಿಗೆ ಇಬ್ಬರು ಮಕ್ಕಳು ಇರುತ್ತಾರೆ. ಈ ಮಕ್ಕಳು ಕೊನಘಟ್ಟ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ ಎಂಬ ಮಾಹಿತಿ ಕೆಲ ಮೂಲಗಳಿಂದ ತಿಳಿದು ಬಂದಿದೆ.
ಮೇಘಾ – ಅಶೋಕ್ ಅವರ ಎರಡು ಮಕ್ಕಳು ಅಶೋಕ್ ಜೊತೆಯಿದ್ದು, ಶಾಲೆಗೆ ಅಶೋಕ್ ಕರೆದೊಯ್ದರೆ, ಕೆಲವೊಮ್ಮೆ ಮೇಘಾ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಾರೆ ಎಂಬ ಆತಂಕ, ಆಕ್ಷೇಪ ಶಾಲೆಯವರದ್ದೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಗೊಂದಲವಾಗಬಾರದೆಂಬ ಕಾರಣ ಗುರುವಾರ ಸಂಜೆ ಅಶೋಕ್ ಮತ್ತು ಅವರ ಸಹೋದರ ಮಕ್ಕಳನ್ನು ಮೇಘಾ ಅವರ ಬಳಿ ಬಿಟ್ಟು ಬರಲೆಂದು ಕೊನಘಟ್ಟ ಗ್ರಾಮದಲ್ಲಿ ವಾಸವಿದ್ದ ಮೇಘಾ – ಮಧನ್ ಮನೆಯ ಬಳಿ ಬಂದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು, ಮೇಘಾ ನೀಡಿದ ಮಚ್ಚನ್ನು ಮಧನ್, ಅಶೋಕ್ ಮೇಲೆ ಬೀಸಿದ್ದು ಅಶೋಕ್ ಅವರ ಕೈಗೆ ತೀವ್ರ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.