ಅರಳುಮಲ್ಲಿಗೆ ಕೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ಆರೋಪಿಗಳಿಂದ ಬೇಟೆಯಾಡಿದ ಮೂರು ನವಿಲುಗಳು, ನಾಡ ಬಂದೂಕು ಮತ್ತು ಟಿವಿಎಸ್ ಮೊಪೇಡ್ ವಾಹನವನ್ನ ಜಪ್ತಿ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ನವಿಲು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದಲ್ಲಿ ಬಂಧಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಬಂಧಿತರನ್ನು ಪುಟ್ಟಪರ್ತಿ ಟೌನ್ ನಿವಾಸಿಗಳಾದ ಶ್ರೀನಿವಾಸ, ಬಾಲಾಜಿ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀನಿವಾಸ ಎಂಬಾತ ಜಾಲಿಗೆ ಶಿವಣ್ಣ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬ ಆರೋಪಿ ಬಾಲಾಜಿ, ಅರಳುಮಲ್ಲಿಗೆಯ ವೆಂಕಟೇಶ್ ಎಂಬುವರ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ರಾತ್ರಿ ಗ್ರಾಮಾಂತರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ನವಿಲು ಬೇಟೆಯಾಡುತ್ತಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ, ಆರೋಪಿಗಳನ್ನ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.