ನಿರಂತರ ಅನ್ನ ದಾಸೋಹ ಸೇವೆಗೆ ಸಾವಿರ ದಿನದ ಸಾರ್ಥಕತೆ

ಇಲ್ಲಿನ ದರ್ಗಾ ಜೋಗಹಳ್ಳಿಯಲ್ಲಿ ಸಮಾಜ ಸೇವಕ ಮಲ್ಲೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಸೋಮವಾರಕ್ಕೆ 1003ನೇ ದಿನಕ್ಕೆ ಕಾಲಿರಿಸಿತು.

1003ನೇ ದಿನದ ಪ್ರಯುಕ್ತ ಅನ್ನದಾಸೋಹ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಕೋವಿಡ್ ಅವಧಿಯಲ್ಲಿ ಸೋಂಕಿತರ ಪ್ರಾಣ ರಕ್ಷಣೆಗಾಗಿ ಶ್ರಮಿಸಿದ ಅಂಬುಲೆನ್ಸ್ ಚಾಲಕರು, ವೈದ್ಯರನ್ನು ಆತ್ಮೀಯವಾಗಿ ಶ್ರಮಿಸಲಾಯಿತು.

ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ತುಮಕೂರಿನ ವರುಣ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ವಿದ್ಯಾರ್ಥಿನಿ ಜಯತೇಷ್ಣಾ, ಡ್ರಾಮಾ ಜೂನಿಯರ್ ಸೀಸನ್-4 ಗೆ ಆಯ್ಕೆಯಾಗಿರುವ ಭೈರವಿ ಹಾಗೂ ಕಿರುತೆರೆ ಕಲಾವಿದೆ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.

ಚಿರ ಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ ಸೇರಿ ಹಲವು ಗಣ್ಯರು ಬಡವರಿಗೆ ಅನ್ನದಾಸೋಹ ನೆರವೇರಿಸಿದರು. ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು. 55 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹೊದಿಕೆ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ಗಾನಮಂಜರಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪರಿಸರವಾದಿ ಕೆ.ಗುರುದೇವ್, ಸಮಾಜ ಸೇವಕ ಹಾಗೂ ಬಿಎಂಟಿಸಿ ಬಸ್ ಚಾಲಕ ಸೆಲ್ವಂ, ಯೋಗಗುರು ಬಿ.ಜಿ.ಅಮರನಾಥ್, ಕನ್ನಡ ಜಾಗೃತಿ ವೇದಿಕೆ ತಾಲೂಕು ಅದ್ಯಕ್ಷ ನಾಗರಾಜ್, ಎ.ಸಿ.ಅಶೋಕ್, ಸೌಮ್ಯ, ಪಿ.ಸಿ.ಲಕ್ಷ್ಮಿನಾರಾಯಣ್, ಮನೋಜ್, ರತ್ನಮ್ಮ, ವರುಣ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *