ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್.ಎಂ. ವಿ. ಅವರ ಬದುಕು ಮತ್ತು ಸಾಧನೆಯನ್ನು ಯುವ ಪೀಳಿಗೆ ಅರಿತಷ್ಟೂ ಬದುಕು ಪ್ರಜ್ವಲಿಸುತ್ತದೆ ಎಂದು ಶ್ರೀ ದೇವರಾಜ ಅರಸ್ ಪದವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಚಿಕ್ಕಣ್ಣ ಹೇಳಿದರು.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಶ್ರೀ ದೇವರಾಜ ಅರಸ್ ಪದವಿ ಸಂಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಎಂಜಿನಿಯರ್ಸ್ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ ಎಂ.ವಿ. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಪ್ರೇರಕಶಕ್ತಿ ಹಾಗೂ ಕಾರಣಕರ್ತರು, ಆ ಮೂಲಕ ಕನ್ನಡಿಗರ ಒಕ್ಕೂಟ, ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಕೂಡಾ ವಿಶ್ವೇಶ್ವರಯ್ಯನವರ ಬೆಂಬಲ ಅಗಾಧವಾದದ್ದು ಎಂದರು.
ವಿಶ್ವೇಶ್ವರಯ್ಯನವರು ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದರು, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯಗಳು, ಮೈಸೂರು ವಿಶ್ವವಿದ್ಯಾಲಯ, ವಿವಿಧ ರೀತಿಯ ಕೈಗಾರಿಕೆಗಳು, ಸಾರ್ವಜನಿಕ ಗ್ರಂಥಾಲಯಗಳು ಇವೆಲ್ಲಾ ವಿಶ್ವೇಶ್ವರಯ್ಯನವರ ಸಮಗ್ರ ಕೊಡುಗೆಗಳು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂವಿಧಾನ ಜಾರಿಯಾದ ಬಳಿಕ ಭಾರತದಲ್ಲಿ ಅಧಿಕೃತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯಿತು. ಬುದ್ಧ, ಬಸವಣ್ಣನವರ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ನೆಲದಲ್ಲಿ ರೂಪುಗೊಂಡಿದೆ, ತಾರತಮ್ಯವನ್ನು ಹೋಗಲಾಡಿಸುವಲ್ಲಿ ಸಂವಿಧಾನ ಸಹಕಾರಿಯಾಗಿದೆ ಎಂದರು.
ಸಂವಿಧಾನ ಕೇವಲ ಭಾರತಕ್ಕೆ ಸೀಮಿತಗೊಳ್ಳದೆ ವಿಶ್ವದ ಹಲವು ದೇಶಗಳು ಸಂವಿಧಾನವನ್ನು ರೂಢಿಸಿಕೊಂಡಿವೆ, ಪ್ರಜೆಗಳಿಂದ, ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಇರುವ ಈ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ನೆನೆಯಲೇ ಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಕೆ.ದಕ್ಷಿಣಮೂರ್ತಿ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಪಿ.ಚೈತ್ರ, ಐ.ಐ.ಕ್ಯೂ.ಎ ಸಂಯೋಜಕರಾದ ದಿವ್ಯ, ಪ್ರಾಧ್ಯಾಪಕರಾದ ಡಾ.ತಾವರೇನಾಯ್ಕ, ಕಲ್ಪನಾ, ಕಿರಣ್, ಶೈಲಜ ಮತ್ತಿತರರು ಹಾಜರಿದ್ದರು.