ಒಂದೇ ರಾತ್ರಿಯಲ್ಲಿ ಎರಡು ದೇವಸ್ಥಾನಗಳಲ್ಲಿನ ಕಾಣಿಕೆ ಹುಂಡಿ ಒಡೆದು ಸರಣಿ ಕಳ್ಳತನ ಮಾಡಿರೋ ಘಟನೆ ತಾಲೂಕಿನ ವೀರಾಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಮಾರಮ್ಮ ಮತ್ತು ಅಂಜನೇಯ ದೇವಸ್ಥಾನಗಳಲ್ಲಿ ಕಳವು ಮಾಡಿರುವ ಕಳ್ಳರು, ಹುಂಡಿಯಲ್ಲಿದ್ದ ಹಣ ಹಾಗೂ ಮಾರಮ್ಮ ದೇವತೆ ಕೊರಳಿನಲ್ಲಿದ್ದ 8 ಚಿನ್ನದ ತಾಳಿಗಳು ಮತ್ತು ಬೆಳ್ಳಿ ಅಭರಣಗಳು ಕಳವು ಮಾಡಿರೋ ಕಳ್ಳರು.
ಹುಂಡಿಯಲ್ಲಿದ್ದ 50 ಸಾವಿರ ರೂ. ನೋಟ್ ಗಳನ್ನ ದೋಚಿದ ಕಳ್ಳರು 3,600 ರೂಪಾಯಿಯ ನಾಣ್ಯಗಳನ್ನ ಹುಂಡಿಯಲ್ಲಿಯೇ ಬಿಟ್ಟು ಹೋಗಿದ್ದಾರೆ.
ದೇವಸ್ಥಾನದ ಪೂಜಾರಿ ಸೋಮವಾರದ ಸಂಜೆ 7:30ರ ಸಮಯದಲ್ಲಿ ದೇವಸ್ಥಾನ ಸ್ವಚ್ಛ ಮಾಡಲು ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ, ಕಳೆದ 5 ವರ್ಷಗಳಿಂದ ಹುಂಡಿ ಹಣವನ್ನ ಹೊರಗೆ ತೆಗೆದಿರಲಿಲ್ಲ, ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ ನಂತರ ಕಳ್ಳರು ಹಿಂಭಾಗದಲ್ಲಿದ್ದ ಅಂಜನೇಯ ದೇವಸ್ಥಾನದ ಹುಂಡಿಯನ್ನ ಕದ್ದು ಗ್ರಾಮದ ಹೊರಗಿನ ನೀಲಿಗಿರಿ ತೋಪಿನಲ್ಲಿ ಹುಂಡಿ ಎಸೆದು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಭಾನುವಾರದ ರಾತ್ರಿಯಲ್ಲಿ ದೇವಸ್ಥಾನದ ಬಳಿ ಓಡಾಡಿರುವ ಮಾಹಿತಿ ಸಿಕ್ಕಿದೆ.