ಇಂದು ನಾಡಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಿನ್ನೆಲೆ, ತಾಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗದೋಷ ನಿವಾರಣೆಗಾಗಿ ನಾಗರಕಲ್ಲುಗಳಿಗೆ ಹಾಲು, ತುಪ್ಪ, ನೀರು ಎರೆದು ಪೂಜೆ ಸಲ್ಲಿಸಿದ ಭಕ್ತಾದಿಗಳು.
ನಾಗರ ಕಲ್ಲುಗಳನ್ನು ಶುದ್ಧ ನೀರಿನಿಂದ ತೊಳೆದು ಅರಿಶಿನ ಕುಂಕುಮ ಹೂಗಳಿಂದ ಅಲಂಕರಿಸಿದ ನಂತರ ನಾಗರ ಕಲ್ಲಿಗೆ ಹಾಲೆರೆದು ಹರಕೆ ತೀರಿಸಿದ ಭಕ್ತಾದಿಗಳು. ಪ್ರತಿ ವರ್ಷ ನಾಗರಪಂಚಮಿ ದಿನದಂದು ನಾಗರಕಲ್ಲಿಗೆ ತಣ್ಣೀರು ಎರೆದರೆ ಸರ್ಪದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಹಿನ್ನೆಲೆ ನಾಗ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ತಣ್ಣೀರು ಎರೆದ ಭಕ್ತರು.
ಕ್ಷೇತ್ರದಲ್ಲಿ ಸಾವಿರಾರು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹೊರಗೆ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.
ನಾವು ಯಾವುದೇ ಶುಭ ಕಾರ್ಯ ಮಾಡಬೇಕೆಂದರೆ ಗಣಪತಿ ಹಾಗೂ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ಅನುಗ್ರಹ ಬೇಕೆ ಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಘಾಟಿ ಕ್ಷೇತ್ರದಲ್ಲಿ ನಾಗಾರಾಧನೆ ಮಾಡುತ್ತಿದ್ದೇವೆ. ದೇವರು ನಮಗೆ ಎಲ್ಲಾ ರೀತಿಯಲ್ಲಿ ಒಳ್ಳೆದು ಮಾಡಿದ್ದಾರೆ ಎಂದು ಶಶಿಕಲಾ ತಿಳಿಸಿದರು.
ಘಾಟಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿರುವ ನಾಗರಕಲ್ಲಿಗೆ ಹಾಲಿನಾಭಿಷೇಕ, ತುಪ್ಪದಾಭಿಷೇಕ, ನೀರಿನಾಭಿಷೇಕ ಮಾಡಿದರೆ ನಾಗದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕಳೆದ ಹತ್ತು ವರ್ಷಗಳಿಂದಲೇ ದೇವಸ್ಥಾನ ಹಿಂಭಾಗದಲ್ಲಿ ನಾಗರ ಕಲ್ಲನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ಪೂಜೆ ಪುನಸ್ಕಾರ ಮಾಡುತ್ತಿರುವುದರಿಂದ ನಮಗೆ ಒಳ್ಳೆಯದು ಆಗಿದೆ ಎಂದು ಶಿವಕುಮಾರ್ ತಿಳಿಸಿದರು.