ಬೀಜ ಬಿತ್ತನೆ ಮಾಡಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಇರುವ ರೈತರಿಗೆ ಮಳೆರಾಯ ಮಳೆ ಸುರಿಸದೆ ಸಂಕಷ್ಟಕ್ಕೆ ದೂಡಿದ್ದಾನೆ. ಕಳೆದ ಎರಡು ವಾರಗಳಿಂದ ಮಳೆಯಾಗದೆ ರೈತರು ಬೆಳೆದ ಬೆಳೆಗಳಿಗೆ ಹಾಗೂ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸೊರಗುತ್ತಿವೆ.
ಹೀಗಾಗಿ ಮಳೆಗಾಗಿ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಪೂಜೆ- ಪುನಸ್ಕಾರಗಳ ಮೊರೆ ಹೋಗುತ್ತಿದ್ದಾರೆ. ಭಾನುವಾರ ತೂಬಗೆರೆ ಹೋಬಳಿಯ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಇಬ್ಬರು ಬಾಲಕರಿಗೆ ವಧು-ವರ ಪೋಷಾಕು ಧರಿಸಿ ಚಂದಮಾಮ ಮದುವೆ ಮಾಡಿಸಿದ್ದರು.
ಇದೀಗ ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಉದ್ಭಬ ಬಸವಣ್ಣ ದೇವರಿಗೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ವಿಶೇಷ ಪೂಜೆ ಸಲ್ಲಿಸಿ, 101 ಈಡುಗಾಯಿ ಹೊಡೆದು ಮಳೆಗಾಗಿ ಪ್ರಾರ್ಥಿಸಿದರು.
ಈ ವೇಳೆ ಗ್ರಾಮದ ಮುಖಂಡ ರವಿಕುಮಾರ್ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ನಮ್ಮೂರಿನ ಪೂಜಾರಿಯ ಕನಸ್ಸಿನಲ್ಲಿ ದೇವರು ಬಂದು ಇಲ್ಲಿ ಬಸವಣ್ಣ ಇದೆ ಅಂತಾ ಹೇಳಿದ್ದರು. ಉತ್ತಮ ಮಳೆ ಬೆಳೆಗಾಗಿ ಇಲ್ಲಿ ಬಸವಣ್ಣ ಇದೆ ಪೂಜಿಸಿ ಎಂದು ಹೇಳಿದ್ದರು ಎಂಬ ಪ್ರತೀತಿ ಇದೆ. ಅಂದಿನಿಂದಲೂ ನಮ್ಮ ಪೂರ್ವಿಕರು ಊರಿನ ಗ್ರಾಮಸ್ಥರಿಂದ ಧವಸ ಧಾನ್ಯಗಳನ್ನ ಸಂಗ್ರಹಿಸಿ ಇಲ್ಲಿಯೆ ಅಡುಗೆ ತಯಾರಿ ಮಾಡಿ ಮಳೆಗಾಗಿ ವಿಶೇಷ ಪೂಜೆ ನೇರವೇರಿಸಲಾಗುತ್ತಿದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉದ್ಭವ ಬಸವಣ್ಣ ಮೂರ್ತಿಗೆ ಶ್ರದ್ಧಾಭಕ್ತಿಯಿಂದ ಹೂವಿನ ಅಲಂಕಾರ, ಕ್ಷೀರಾಭಿಷೇಕ ಮಾಡಲಾಯಿತು. ನಂತರ ನೆರೆದಿದ್ದ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.
ಈ ವೇಳೆ ಹೊಸಹಳ್ಳಿ ಗ್ರಾ.ಪಂ ಸದಸ್ಯ ಆನಂದ್, ಪೂಜಾರಿ ಸಿದ್ದಪ್ಪ, ಹೊಸಹಳ್ಳಿ ವಿಭಾಗದ ಬೆಸ್ಕಾಂ ಸಹಾಯಕ ಎಂಜಿನಿಯರ್ ಶಾಂತಕುಮಾರ್, ಗ್ರಾಮದ ಮುಖಂಡರಾದ ನಾಗೇಶ್, ರವಿಕುಮಾರ್, ಸತೀಶ್ ಮತ್ತಿತರರು ಇದ್ದರು.