ಯೋಗಾಸನ ಸ್ಪರ್ಧೆಯಲ್ಲಿ ಕಂಟನಕುಂಟೆ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ 21 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಆಗಸ್ಟ್ 6 ರಂದು ರಾಷ್ಟ್ರೀಯ ಪ್ರಕೃತಿ ಯೋಗ ಅಕಾಡೆಮಿಯಿಂದ ಯಲಹಂಕದಲ್ಲಿರುವ ನಾಗಾರ್ಜುನ ಕಾಲೇಜಿನಲ್ಲಿ ಯೋಗಾಸನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಕಂಟನಕುಂಟೆ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 21 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆ.ಜಿ ಶ್ರೀನಿವಾಸ್ ಮಾತನಾಡಿ, ಮಕ್ಕಳು ಮಾನಸಿಕ ಒತ್ತಡ, ಏಕಾಗ್ರತೆ, ಚಟುವಟಿಕೆಗಳಲ್ಲಿ ಮಾನಸಿಕವಾಗಿ ಸದೃಡವಾಗಲು, ಲವಲವಿಕೆಯಿಂದ ಕ್ರಿಯಾಶೀಲರಾಗಲು ಯೋಗಾಸನ ಒಂದೆ ಸುಲಭವಾದ ಮಾರ್ಗ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಉಷಾ ಶ್ರೀನಿವಾಸ್, ಮುಖ್ಯೋಪಾಧ್ಯಾಯರಾದ ಶೋಭ ಯೋಗ ಶಿಕ್ಷಕರಾದ ರೂಪದೇವಿಯವರಿಗೆ ಯೋಗ ಕಲಾಶ್ರಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೀರ್ತಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.