ಕಾವೇರಿ 2.O ತಂತ್ರಾಂಶ ಪತ್ರಬರಹಗಾರ ಹಾಗೂ ಜನಸ್ನೇಹಿಯಾಗಿರದೇ ಅಧಿಕಾರಿ ಸ್ನೇಹಿಯಾಗಿದೆ-ಪತ್ರ ಬರಹಗಾರ ಹನುಮಂತಯ್ಯ

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರಳೀಕೃತ ಮಾಡುವ ನಿಟ್ಟಿನಲ್ಲಿ 256 ಉಪನೋಂದಣಿ ಕಚೇರಿಗಳಲ್ಲಿ ಕಾವೇರಿ-2.0 ತಂತ್ರಾಂಶ ಯಶಸ್ವಿಯಾಗಿ ಅನುಷ್ಠಾನವಾಗಿದೆ. ಆದರೆ ಈ ತಂತ್ರಾಂಶದಿಂದ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚು ಎಂದು ತಾಲೂಕಿನ ಪತ್ರ ಬರಹಗಾರರು ದೂರಿದ್ದಾರೆ.

ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ-2.0 ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಕಾಲಕ್ಕೆ ನೋಂದಣಿಯಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಈ ತಂತ್ರಾಂಶ ಪತ್ರಬರಹಗಾರರು ಹಾಗೂ ಸಾರ್ವಜನಿಕರ ಸ್ನೇಹಿಯಾಗಿರದೇ ಕೇವಲ ಅಧಿಕಾರಿಗಳ ಸ್ನೇಹಿಯಾಗಿದೆ ಎಂದು ತಾಲ್ಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಕೆ.ಬಿ.ಹನುಮಂತಯ್ಯ ಆರೋಪಿಸಿದರು.

ಕಾವೇರಿ 1‌ ತಂತ್ರಾಂಶದಿಂದ 2.Oಗೆ ಮೇಲ್ದರ್ಜೆಗೇರಿಸಿದ ಕಾರಣ ಸರ್ವರ್‌ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಮತ್ತೊಂದೆಡೆ ಆನ್‌ಲೈನ್‌ ಪೇಮೆಂಟ್‌ ಮಾಡಿದಾಗ ಬ್ಯಾಂಕ್‌ ಖಾತೆಯಿಂದ ಮೊತ್ತ ಕಡಿತವಾದರೂ ಖಜಾನೆಗೆ ತಲುಪಿರುವ ಮಾಹಿತಿ ಸಬ್‌ ರಿಜಿಸ್ಟಾರ್‌ಗೆ ಸಿಗುತ್ತಿಲ್ಲ. ಎಲ್ಲರ ಬಳಿ ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿಂಗ್ ಸೌಲಭ್ಯ ಇರುವುದಿಲ್ಲ, ಆದಾಗ್ಯೂ ಉಳ್ಳವರ ಬಳಿ ಕಾಡಿ ಬೇಡಿ ಆನ್ ಲೈನ್ ಪೇಮೆಂಟ್ ಮಾಡಿಸಲಾಗುತ್ತದೆ. ಆದರೆ ಸರ್ವರ್ ಸಮಸ್ಯೆಯಿಂದ ಪದೇಪದೆ ಶುಲ್ಕ ಪಾವತಿಸುವಂತೆ ಆನ್‌ಲೈನ್‌ನಲ್ಲಿ ತೋರಿಸುತ್ತಿದೆ. ಇದರಿಂದ ಸಾರ್ವಜನಿಕರು ನೋಂದಣೆ ಕಚೇರಿ ಹಾಗೂ ಸೈಬರ್‌ ಸೆಂಟರ್‌ಗಳಿಗೆ ಅಲೆದಾಡುವಂತಾಗಿದೆ ಎಂದರು.

ಸರಕಾರ ಕೂಡಲೇ ತಂತ್ರಾಂಶದಲ್ಲಿರುವ ದೋಷಗಳ ಬಗ್ಗೆ ಗಮನವನ್ನು ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಮನವಿ ಮಾಡಿದರು.

ಕೆ.ಬಿ.ನಾಗರಾಜ ಮಾತನಾಡಿ, ಕಾವೇರಿ-1 ತಂತ್ರಾಂಶ ಇದ್ದಾಗ ಚಲನ್ ಮೂಲಕ ಬ್ಯಾಂಕಿಗೆ ಹಣ ಕಟ್ಟಿ ಅದನ್ನು ತಂದು ನೋಂದಣಿ ಕಚೇರಿಗೆ ಕೊಡುತ್ತಿದ್ದೆವು, ಒಂದು ವೇಳೆ ಕ್ರಯ ನೋಂದಣಿಯಾಗದಿದ್ದರೆ ಅದನ್ನು ಅದೇ ಇನ್ನೊಬ್ಬ ಕ್ರಯದಾರರಿಗೆ ನೀಡಿ ಅವರ ಹಣ ಹಿಂದಿರುಗಿಸುತ್ತಿದ್ದೆವು, ಈಗ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕು, ಒಂದು ಸ್ವತ್ತಿಗೆ ಹಣ ಪಾವತಿ ಮಾಡಿದ ನಂತರ ಒಂದು ವರ್ಷವಾದರೂ ಅದೇ ಸ್ವತ್ತಿನ ನೋಂದಣಿಗೆ ಬಳಸಬೇಕು, ಬೇರೆ ಸ್ವತ್ತಿಗೆ ವರ್ಗಾಯಿಸುವಂತಿಲ್ಲ. ಇದರಿಂದಾಗಿ ಸ್ವತ್ತು ಖರೀದಿದಾರರಿಗೆ ಸಮಸ್ಯೆಯಾಗುತ್ತಿದೆ. ಖಜಾನೆಗೆ ಹಣ ಪಾವತಿ ಮಾಡುವುದನ್ನು ಮೊದಲಿನಂತೆ ಚಲನ್ ಮುಖಾಂತರ ಪಾವತಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದರು.

ಪತ್ರ ಬರಹಗಾರ ಬಿ.ಸಿ. ಗೋಪಾಲಕೃಷ್ಣ ಅವರು ಮಾತನಾಡಿ, ಒಂದು ವಾರದ ಹಿಂದೆ ಸ್ವತ್ತು ಖರೀದಿಗಾಗಿ ಗ್ರಾಹಕರಿಂದ 65 ಸಾವಿರ ಹಣ ಆನ್‌ಲೈನ್ ಪೇಮೆಂಟ್ ಮಾಡಿದ್ದೆವು ಆದರೆ ನೋಂದಣಿ ಕಚೇರಿಯಲ್ಲಿ ಪರಿಶೀಲನೆ ಮಾಡಿದಾಗ ಹಣ ಜಮಜೆಯಾಗಿಲ್ಲ ಎಂದು ಬಂದಿದೆ. ಇದರಿಂದ ಗ್ರಾಹಕರ ಹಣ ನಾನೇ ಭರಿಸುವಂತಾಯಿತು, ಇಂದು ನನಗೆ ಹಣ ವಾಪಸು ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಶಶಿಧರ್ ಎಂಬುವವರ ಬಳಿ ನಂಜಾರೆಡ್ಡಿ ಅವರು ಒಂದು ಸ್ವತ್ತು ಖರೀದಿ ಮಾಡಿದ್ದರು, ನೋಂದಣಿ ಪತ್ರ ಮತ್ತು ಇಸಿ ( ರುಣಭಾರ) ಯಲ್ಲಿ ಸರಿಯಾಗಿದೆ ಆದರೆ ಚೆಕ್‌ ಲಿಸ್ಟ್ ಮಾತ್ರ ಕ್ರಯದಾರರ ಹೆಸರು ಸರಿ ಇದ್ದು, ಮಾರಾಟಗಾರರು ಪುಷ್ಪರಾಣಿ ಎಂದು ಬಂದಿದೆ, ಕ್ರಯದಾರರು ಭಯಗೊಂಡು ಇಂತಹ ತಪ್ಪಗಳು ಯಾಕಾಗಿ ಮಾಡುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ದೂರಿದರು.

ಉಪನೋಂದಣಾಧಿಕಾರಿ ಸತೀಶ್ ಅವರು ಪ್ರತಿಕ್ರಿಯಿಸಿ ಕಾವೇರಿ-2.0 ತಂತ್ರಾಂಶ ಸಂಪೂರ್ಣ ಜನಸ್ನೇಹಿಯಾಗಿದೆ, ಇದು ಆರಂಭಿಕ ಹಂತ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತದೆ, ಆದಷ್ಟೂ ಬೇಗ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖಾ ಕಚೇರಿಯನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ಕಚೇರಿ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ಮಾಡುವಂತೆ ಹಲವು ಬಾರಿ ಅರ್ಜಿ, ಮನವಿ ಮಾಡಿದರು ಸ್ಥಳಾಂತರ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಸಂಬಂಧಿಸಿದ ಇಲಾಖೆ.

ಕೂಡಲೇ ನೋಂದಣಿ ಮತ್ತು ಮುದ್ರಾಂಕ ಇಲಾಖಾ ಕಚೇರಿ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ಮಾಡಿ ಸಾರ್ವಜನಿಕರು ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ತಪ್ಪಿಸಬೇಕು ಎಂದು ಪತ್ರಬರಹಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಜಯಣ್ಣ, ಕಾರ್ಯದರ್ಶಿ ಎನ್‌.ತಿರುಮಲೇಶ್, ಸಹ ಕಾರ್ಯದರ್ಶಿ ಆರ್.ಸೌಮ್ಯಾ, ಖಜಾಂಚಿ ಕೆಪಿ ಶ್ರೀನಿವಾಸ್, ಪತ್ರ ಬರಹಗಾರ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *