ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ಮಂಗಳವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಕ್ರಿಯ ಕ್ಷಯ ರೋಗ ಪತ್ತೆ ಹಾಗೂ ಕ್ಷಯ ರೋಗದ ಬಗ್ಗೆ ಅರಿವು ಮತ್ತು ರೋಗ ಲಕ್ಷಣ ಕಂಡು ಬಂದವರ ಗಂಟಲಿನ ಕಫಾ ಮಾದರಿಯನ್ನು ಸಂಗ್ರಹಿಸುವ ಆಂದೋಲನ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಕ್ಷಯರೋಗ ತಜ್ಞ ವೈದ್ಯ ಆನಂದ್ ಜು.17ರಿಂದ ಆ.2ರವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮದಲ್ಲೂ ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ನಡೆಸಿದ್ದಾರೆ. 2025ರ ಒಳಗೆ ಕ್ಷಯ ಮುಕ್ತ ಭಾರತ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ. ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟ ಸತತವಾದ ಕೆಮ್ಮು, ಜ್ವರ, ಸಂಜೆ ವೇಳೆ ಜ್ವರ ಬರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಲಕ್ಷಣಗಳಾಗಿವೆ ಎಂದು ವಿವರಿಸಿದರು.
ಇದೇ ವೇಳೆ ಕ್ಷಯ ರೋಗದ ಲಕ್ಷಣ, ಪರೀಕ್ಷೆ, ಅಪಾಯದ ಬಗ್ಗೆ, ಕ್ಷಯ ಗುಣಪಡಿಸುವ ಬಗ್ಗೆ ಡಿಪೋದಲ್ಲಿದ್ದ ಚಾಲಕರು, ನಿರ್ವಾಹಕರು, ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಬಳಿಕ ಅವರನ್ನು ಕ್ಷಯ ಪರೀಕ್ಷೆಗೆ ಒಳಪಡಿಸಲಾಯಿತು.
ಈ ವೇಳೆ ಡಿಪೋ ವ್ಯವಸ್ಥಾಪಕ ಎಸ್.ಆರ್.ಸಂತೋಷ್, ಕ್ಷಯರೋಗ ಸಂದರ್ಶಕ ಯುವರಾಜು, ಹಿರಿಯ ಚಿಕಿತ್ಸಕ ಆನಂದ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಇದ್ದರು.