ತಾಲೂಕಿನ ಮೆಳೇಕೋಟೆ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಶ್ರೀನಿವಾಸಮೂರ್ತಿ ಮತ್ತು ಭಾಗ್ಯಮ್ಮ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹಾಗೂ ಮಂಜುನಾಥ ಮತ್ತು ಲಕ್ಷ್ಮಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದರು.
20 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ 14 ಜನ ಜೆಡಿಎಸ್ ಬೆಂಬಲವಾಗಿ ಹಾಗೂ 6 ಜನ ಕಾಂಗ್ರೆಸ್ ಪರವಾಗಿ ಮತ್ತು ಉಪಾಧ್ಯಕ್ಷೀಯ ಚುನಾವಣೆಯಲ್ಲಿ 12 ಜನ ಜೆಡಿಎಸ್ ಬೆಂಬಲವಾಗಿ ಹಾಗೂ 8 ಜನ ಕಾಂಗ್ರೆಸ್ ಪರವಾಗಿ ಮತ ಚಲಾವಣೆ ಮಾಡಿದ್ದರು.
ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅನಿತಾ ಪ್ರಕಟಿಸಿದ ನಂತರ ಜೆಡಿಎಸ್ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ ಮತ್ತು ಉಪಾಧ್ಯಕ್ಷರಾದ ಭಾಗ್ಯಮ್ಮ ಅವರಿಗೆ ಗಣ್ಯರು ಅಭಿನಂದನೆಗಳು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಪ್ಪಯಣ್ಣ, ಕುರುವಿಗೆರೆ ನರಸಿಂಹಯ್ಯ, ಮೆಳೇಕೋಟೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಶ್ವೇತಾ ಮುನಿಶಾಮಿ ಗೌಡ, ಪ್ರೀತಿ ಗೌರೀಶ್ ಮತ್ತು ಪಿಡಿಒ ಗಂಗಭೈರಪ್ಪ, ಚುನಾವಣಾ ಅಧಿಕಾರಿ ಅನಿತಾದೇವಿ.ಎನ್ ನಾಯಕ್, ಸದಸ್ಯರುಗಳಾದ ಬೈರೇಗೌಡ, ಮುನೇಗೌಡ, ಉದ್ಯಮಿ ಸಂದೀಪ್. ತೂಬಗೆರೆ ಹೋಬಳಿಯ ಜೆಡಿಎಸ್ ಅಧ್ಯಕ್ಷರಾದ ಜಗನ್ನಾಥ, ಜೆಡಿಎಸ್ ಮುಖಂಡರಾದ ಚಿಕ್ಕಪ್ಪಯ್ಯ, ಗೌರೀಶ್, ಮುರುಳಿ, ಶ್ರೀನಿವಾಸ್ ಶೆಟ್ಟರ್, ಉದಯ ಆರಾಧ್ಯ, ನಂದೀಶ್ ಮತ್ತಿತರರು ಭಾಗವಹಿಸಿದ್ದರು.