ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪಿಸುವ ಹಾಗೂ ಜನರ ಕುಂದು ಕೊರತೆಗಳನ್ನು ಕೇಳಿ ಪರಿಹರಿಸಲು ಪ್ರತಿ ಭಾನುವಾರ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಮುಖಂಡ ಮಂಜುನಾಥ ಎಂ.ಅದ್ದೆ ಹೇಳಿದರು.
ಅವರು ತಾಲ್ಲೂಕಿಗೆ ಸಮೀಪದ ಯಲಹಂಕ ವಿಧಾನ ಸಭಾ ಕ್ಷೇತ್ರದ ಹನಿಯೂರು ಗ್ರಾಮದಲ್ಲಿ ಭಾನುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ಹೇಳಿರುವಂತೆ ನಮ್ಮ ಪಕ್ಷ ದೇಶದಲ್ಲಿ ಪ್ರೀತಿಯ ಅಂಗಡಿ ತೆರೆದಿದೆ. ನಮಗೆ ಮತಹಾಕುವವರು ಮಾತ್ರ ನಮ್ಮವರಷ್ಟೇ ಅಲ್ಲ, ಇಡೀ ದೇಶದ ಪ್ರತಿ ಪ್ರಜೆಯು ಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕು. ಇದೇ ರೀತಿಯ ವಾತಾವರಣ ನಮ್ಮ ಕ್ಷೇತ್ರದಲ್ಲೂ ಸಹ ಇರುವಂತೆ ನೋಡಿಕೊಳ್ಳುವ ಜವಾಬ್ಧಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.
ಸಣ್ಣ ಪುಟ್ಟ ಭೂ ವಿವಾದಗಳು, ಭೂ ದಾಖಲೆಗಳ ತಿದ್ದುಪಡಿಗಳನ್ನು ಗ್ರಾಮ ಹಂತದಲ್ಲೇ ಸರಿಪಡುವ ನಿಟ್ಟಿನಲ್ಲಿ ಕಂದಾಯ ಅದಾಲತ್ ನಡೆಸುವ ಕುರಿತಂತೆ ಈಗಾಗಲೇ ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೇಶವ ರಾಜಣ್ಣ ಮಾತನಾಡಿ, ನಾನು ಸೋತ್ತಿದ್ದರು ಜನರೊಂದಿಗೆ ಇದ್ದು ಪಕ್ಷ ಸಂಘಟನೆ ಹಾಗೂ ಜನರ ಕೆಲಸ ಮಾಡುತ್ತೇನೆ. ಮತದಾರರನ್ನು ಬ್ಲಾಕ್ ಮೇಲ್ ಮಾಡಿ ರಾಜಕಾರಣ ಮಾಡುವ ಪ್ರವೃತ್ತಿ ನಮ್ಮದಲ್ಲ. ಹಾಲು ಮಾರಾಟ ಮಾಡಿ ಶ್ರಮದ ದುಡಿಮೆಯಿಂದ ಶ್ರೀಮಂತನಾಗಿದ್ದೇನೆ ಹೊರತು ಬೇರೆಯವರ ಆಸ್ತಿ ಕಬಳಿಸಿ ದೊಡ್ಡವನಾಗಿಲ್ಲ. ಯಲಹಂಕ ಕ್ಷೇತ್ರದಲ್ಲಿ ಬಸವಲಿಂಗಪ್ಪ, ಪ್ರಸನ್ನಕುಮಾರ್ ನಂತರ ಯಾರು ಸಹ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿಲ್ಲ. ಮತ್ತೆ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಳೇಯ ವೈಭವನದ ದಿನಗಳು ಮರುಕಳಿಸಲಿವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಯಲಹಂಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೇಶವರಾಜಣ್ಣ ಅವರು ಸೋತಿದ್ದರು ಪಕ್ಷ ಸಂಘಟನೆ, ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮುಂದುವರೆಸುವ ಸಲುವಾಗಿಯೇ ಜನಸ್ಪಂದನ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಭಾಗದ ಜನರ ವೈಯಕ್ತಿಕ ಕೆಲಸಗಳು ಆಗಬೇಕಿದ್ದರೆ ಮೊದಲು ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಇಲ್ಲವಾದರೆ ಅದು ಕಾನೂನು ಬದ್ದವಾಗಿದ್ದರೂ ಕೆಲಸ ಆಗದಂತೆ ತಡೆದು ಕಿರುಕುಳ ನೀಡಲಾಗುತಿತ್ತು ಎಂದು ದೂರಿದರು.
ಮನೆಯ ಯಜಮಾನಿ ಖಾತೆಗೆ 2000 ರೂ. ಬರುವ ಗೃಹ ಲಕ್ಷ್ಮೀ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಮೊಬೈಲ್ ಆಪ್ ಬರಲಿದೆ. ಪಕ್ಷದ ಪ್ರತಿಯೊಬ್ಬರು ಮನೆಗಳಿಗೆ ಭೇಟಿ ನೀಡಿ ಮೊಬೈಲ್ಗಳಲ್ಲೇ ಹೆಸರು ನೋಂದಣಿ ಮಾಡುವ ಕೆಲಸವನ್ನು ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ಚಂದ್ರಶೇಖರ್, ಮಣಿ, ಚಲುವಮೂರ್ತಿ, ಬಸವರಾಜು, ಲಿಂಗರಾಜು, ಕಾಕೋಳು ಬಾಬು, ಚಂದ್ರು ಕಾರ್ಲಾಪುರ, ಭ್ಯಾತ ಗೋಪಾಲ್, ಲಕ್ಷ್ಮೀಕಾಂತ್, ಎಸ್ಸಿ ಘಟಕದ ವೆಂಕಟೇಶ್, ಅಂಜನಮುರ್ತಿ ಇದ್ದರು.