ಬಿಬಿಎಂಪಿ ಕಸದ ಲಾರಿ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು-ದಾಬಸ್ಪೇಟೆ ಹೆದ್ದಾರಿಯ ಹುಲಿಕುಂಟೆ ಗ್ರಾಮದ ಬಳಿ ಘಟನೆ ನಡೆದಿದೆ. ಮರಳುಕುಂಟೆ ಗ್ರಾಮದ ಯುವಕರಾದ ಮಾರುತಿ (28), ಮಹೇಶ್(30) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಚಿಗರೇನಹಳ್ಳಿ ಬಳಿಯಿರುವ ಬಿಬಿಎಂಪಿ ಕಸದ ಡಂಪ್ ಯಾರ್ಡ್ ಎಂಎಸ್ ಜಿಪಿ ಘಟಕಕ್ಕೆ ಕಸವನ್ನು ಡಂಪ್ ಮಾಡಿ ವಾಪಸ್ ಹೋಗುತ್ತಿದ್ದ ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಮಧುರೆಯಲ್ಲಿ ಶನಿಮಹಾತ್ಮ ಸ್ವಾಮಿಯ ದರ್ಶನ ಮುಗಿಸಿ ಮುಡಿಕೊಟ್ಟ ಯುವಕರು ವಾಪಸ್ ಸ್ವಗ್ರಾಮಕ್ಕೆ ಬರುವಾಗ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಶಾಸಕ ವೆಂಕಟರಮಣಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಬಿಬಿಎಂಪಿ ಕಸದ ಘಟಕವನ್ನು ಮುಚ್ಚುವಂತೆ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ಕಸದ ಘಟಕದಿಂದ ತಾಲೂಕಿನ ಜನ ಪ್ರಾಣ ತೆತ್ತುತ್ತಿದ್ದಾರೆ. ಕಸದ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರವೂ ಹದಗೆಟ್ಟಿದೆ. ನೀರಿನ ಮೂಲವು ಸಂಪೂರ್ಣ ಕಲುಷಿತಗೊಂಡಿದೆ.
ಅಪಘಾತ ಪ್ರಕರಣಗಳಿಂದ ತಾಲೂಕಿನ ಜನತೆ ಬೇಸತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಸರಕಾರ ಶೀಘ್ರವಾಗಿ ಕಸದ ಘಟಕವನ್ನು ಮುಚ್ಚುವಂತೆ ಆಗ್ರಹಿಸಿದರು.
ಕಳೆದ ಮೂರು ತಿಂಗಳ ಹಿಂದಷ್ಟೇ ಮೂಗಿನೇಹಳ್ಳಿ ಕ್ರಾಸ್ ಬಳಿ ಬಿಬಿಎಂಪಿ ಕಸದ ಲಾರಿಗೆ ಓರ್ವ ಯುವಕ ಬಲಿಯಾಗಿದ್ದ. ಕಳೆದ ಒಂದು ವಾರದ ಹಿಂದೆ ದಾಬಸ್ ಪೇಟೆಯಲ್ಲಿಯೂ ಬಿಬಿಎಂಪಿ ಕಸದ ಲಾರಿಗೆ ಸಿಕ್ಕಿ ಓರ್ವ ಯುವಕ ಸಾವನ್ನಪ್ಪಿದ್ದರು.
ಸ್ಥಳಕ್ಕೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ಸಿಬ್ಬಂದಿ ದೌಡು ಪರಿಶೀಲನೆ. ಅಪಘಾತವೇಸಗಿ ಲಾರಿ ಸಮೇತ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.