ತಾಲೂಕಿನಲ್ಲಿ ಅಕ್ರಮ ಬಡಾವಣೆ ಹಾವಳಿ; ಅಕ್ರಮ ಬಡಾವಣೆಗಳ ತೆರವಿಗೆ ಆಗ್ರಹ: ಭೂ ಪರಿವರ್ತನೆಗೊಳಿಸಿ ಉಂಡೆ ಖಾತೆ ಆರೋಪ

ತಾಲೂಕಿನಲ್ಲಿ ಅಕ್ರಮ ಬಡಾವಣೆಗಳ ಹಾವಳಿ ಹೆಚ್ಚಾಗಿ ಭೂ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ, ಭೂ ಮಾಫಿಯಾದವರು ಭೂ ಉದ್ದೇಶ ಬದಲಾವಣೆ ಮಾಡಿ ಭೂ ಪರಿವರ್ತನೆಗೊಳಿಸಿ ಪಂಚಾಯಿತಿಗಳಲ್ಲಿ ಉಂಡೆ ಖಾತೆ ಮಾಡಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಕನ್ನಡ ಪರ ಸಂಘಟನೆ ಒಕ್ಕೂಟದ ಜಿಲ್ಲಾಧ್ಯಕ್ಷ ಎ.ನಂಜಪ್ಪ ಆರೋಪ ಮಾಡಿದರು.

ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಎದುರು ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಉಂಡೆ ಖಾತೆ ಮಾಡಿಸಿ ಮಾರಾಟ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ತುಂಬಾ ನಷ್ಟವನ್ನುಂಟು ಮಾಡಲಾಗುತ್ತಿದೆ. ಅದೇರೀತಿ ಜನಸಾಮಾನ್ಯರಿಗೂ ಕೂಡ ಮೋಸ ಮಾಡಲಾಗಿತ್ತಿದೆ ಎಂದರಲ್ಲದೆ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಬಡಾವಣೆಗಳನ್ನ ನಿರ್ಮಿಸಿ ಮಾರಾಟ ಮಾಡುತ್ತಿರುವ ಭೂಮಾಫಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ವಿವಿಧ ಸಂಘಟನೆಗಳ ಸದಸ್ಯರು, ಹೋರಾಟಗಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *