ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಸ್ಪೃಶ್ಯತೆ ಆಚರಣೆ- ಗೂಳ್ಯ ಹನುಮಣ್ಣ ಆರೋಪ

ಆಹ್ವಾನ ಪತ್ರಿಕೆಯಲ್ಲಿ ಡಾ.ಬಿಆರ್.ಅಂಬೇಡ್ಕರ್ ರಸ್ತೆ ಬದಲಿಗೆ ಜಿ.ರಾಮೇಗೌಡ ರಸ್ತೆ ಎಂದು ಮುದ್ರಣ ಮಾಡುವ ಮೂಲಕ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಸ್ಪೃಶ್ಯತೆ ಆಚರಣೆ ಮಾಡಿದೆ ಎಂದು ಪ್ರಜಾ ವಿಮೋಚಾನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಆರೋಪಿಸಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜೂನ್ 27 ರಂದು ನಾಡಪ್ರಭು ಕೆಂಪೇಗೌಡ ಅವರ 513ನೇ ಜನ್ಮದಿನಾಚರಣೆ ಸಮಾರಂಭವನ್ನು ಆಯೋಜನೆ ಮಾಡಿದೆ.

ಸಮಾರಂಭ ನಡೆಯುವ ಒಕ್ಕಲಿಗರ ಭವನವು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿದೆ, ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಿ ಸುಮಾರು 30 ವರ್ಷಗಳು ಕಳೆದಿವೆ, ಅಂದಿನ ಪುರಸಭೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸಿದೆ, ತಾಲ್ಲೂಕು ಕಚೇರಿ ಇರುವ ಬಸವೇಶ್ವರ ವೃತ್ತದಲ್ಲಿ ಕಳೆದ ವರ್ಷ ನಗರಸಭೆ ವತಿಯಿಂದ ನಾಮ ಫಲಕವನ್ನೂ ಹಾಕಲಾಗಿದೆ, ಆದರೂ ಪ್ರತಿ ಕಾರ್ಯಕ್ರಮಗಳು ನಡೆದಾಗ ತಾಲ್ಲೂಕು ಆಡಳಿತ ಸೇರಿದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಸ್ತೆಯ ಹೆಸರನ್ನು ಪದೇ ಪದೇ ವಿವಾದಗೊಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನವನ್ನು ಬರೆದು ಕೊಟ್ಟವರು, ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನದ ದಿನ ಎಂದು 194 ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ ಆದರೆ, ಈ ಶಾಪಗ್ರಸ್ತ ದೇಶ ಮಾತ್ರ ಬಾಬಾಸಾಹೇಬರನ್ನು ಜಾತಿಯ ಪಂಜರದಲ್ಲಿ ಬಂದಿಸಿದೆ ಎಂದರು.

ಈ ಕೂಡಲೇ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಹ್ವಾನ ಪತ್ರಿಕೆಯನ್ನು ಬದಲಾಯಿಸಬೇಕು ತಪ್ಪಿದಲ್ಲಿ ನಾಳೆಯ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *