
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಸೆರೆಹಿಡಿದ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಸೆರೆಹಿಡಿದಿರುವ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಹಾಗೂ ಮೂಡಿಗೆರೆ ಭಾಗಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿರುವುದು ನಯನಾ ಮೋಟಮ್ಮ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನದಲ್ಲಿ ಸಿಕ್ಕ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸುವ ನಿರ್ಧಾರದಿಂದ ಸ್ಥಳೀಯ ಜನರಿಗೆ ತೊಂದರೆಯಾಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆನೆಗಳ ಸ್ಥಳಾಂತರದ ವಿಚಾರವಾಗಿ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ನಯನಾ ಮೋಟಮ್ಮ ಅವರು ಸೋಮವಾರ ವಿಧಾನಸೌಧದಲ್ಲಿರುವ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರ ಕಚೇರಿಗೆ ರಾಜೀನಾಮೆ ಪತ್ರದೊಂದಿಗೆ ಆಗಮಿಸಿದ್ದಾರೆ. ಆದರೆ, ಸಭಾಧ್ಯಕ್ಷರು ಕಚೇರಿಯಲ್ಲಿ ಇಲ್ಲದ ಕಾರಣ, ಅವರ ಆಪ್ತ ಕಾರ್ಯದರ್ಶಿ ಅಶೋಕ ಮಿರ್ಜಿಗೆ ರಾಜೀನಾಮೆ ಪತ್ರ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಆನೆಗಳ ಸ್ಥಳಾಂತರದ ವಿಚಾರವಾಗಿ ಸ್ವಪಕ್ಷದ ಸರ್ಕಾರದ ನಿರ್ಧಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕಿ ನಯನಾ ಮೋಟಮ್ಮ ಅವರ ರಾಜೀನಾಮೆ ನಡೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರು ನಿಜವಾಗಿಯೂ ರಾಜೀನಾಮೆ ಸಲ್ಲಿಸುತ್ತಾರೆಯೇ ಅಥವಾ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಈ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.