ಮೆಣಸಿನಕಾಯಿ ಬೆಳೆಯಲ್ಲಿ ಕಪ್ಪು ಥ್ರಿಪ್ಸ್ ನಿಯಂತ್ರಣಕ್ಕೆ ಪರಿಸರ ಸ್ನೇಹಿ ಕ್ರಮ

 

ದೊಡ್ಡಬಳ್ಳಾಪುರ: ಮೆಣಸಿನಕಾಯಿ ಬೆಳೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಪ್ಪು ಥ್ರಿಪ್ಸ್ ಕೀಟದ ಬಾಧೆ ಹೆಚ್ಚಾಗುತ್ತಿದ್ದು, ಇದರಿಂದ ಶೇ.60ರಷ್ಟು ಇಳುವರಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ರೈತರು ಅನುಸರಿಸಬೇಕು ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದರು.

ತಾಲೂಕಿನ ವಡ್ಡರಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಮೆಣಸಿನಕಾಯಿ ಬೆಳೆಯಲ್ಲಿ ಕಪ್ಪು ಥ್ರಿಪ್ಸ್ ಕೀಟದ ಪರಿಸರ ಸ್ನೇಹಿ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕಪ್ಪು ಥ್ರಿಪ್ಸ್ ಕೀಟದ ಸಮಗ್ರ ನಿರ್ವಹಣೆಗಾಗಿ ಅನುಸರಿಸಬೇಕಾದ ಕ್ರಮಗಳನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಪ್ರತಿ ಹೆಕ್ಟೇರ್‌ಗೆ 2.5 ಟನ್ ಪುಷ್ಟೀಕರಿಸಿದ ಕೊಟ್ಟಿಗೆ ಗೊಬ್ಬರ ಹಾಗೂ 500 ಕೆ.ಜಿ. ಬೇವಿನ ಹಿಂಡಿಯನ್ನು ಬಳಸುವುದರ ಜೊತೆಗೆ, ಪ್ರತಿ 100 ಕೆ.ಜಿ. ಕೊಟ್ಟಿಗೆ ಗೊಬ್ಬರಕ್ಕೆ 2 ಕೆ.ಜಿ. ಮೆಟಾರೈಜಿಯಂ ಅನಿಸೋಪ್ಲಿಯೆ (Metarhizium anisopliae) ಜೈವಿಕ ಶಿಲೀಂಧ್ರವನ್ನು ಬೆರೆಸಿ ಮಣ್ಣಿಗೆ ನೀಡುವ ತಾಂತ್ರಿಕತೆಯನ್ನು ಪರಿಚಯಿಸಲಾಯಿತು.

ಅಲ್ಲದೆ, ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರತಿ ಹೆಕ್ಟೇರ್‌ಗೆ 50 ಬಿಳಿ ಮತ್ತು ನೀಲಿ ಬಣ್ಣದ ಅಂಟು ಬಲೆಗಳನ್ನು ಅಳವಡಿಸಲಾಯಿತು. ಬೇವಿನ ಎಣ್ಣೆ ಹಾಗೂ ಹೊಂಗೆ ಎಣ್ಣೆಯನ್ನು ಪ್ರತಿ ಲೀಟರ್ ನೀರಿಗೆ 3 ಮಿ.ಲೀ. ಪ್ರಮಾಣದಲ್ಲಿ ಸಿಂಪಡಿಸುವುದರ ಜೊತೆಗೆ, ಬ್ಯೂವೇರಿಯಾ ಬ್ಯಾಸಿಯಾನಾ (Beauveria bassiana) ಮತ್ತು ಲೆಕಾನಿಸಿಲಿಯಂ ಲೆಕಾನಿ (Lecanicillium lecanii) ಜೈವಿಕ ಶಿಲೀಂಧ್ರಗಳನ್ನು ಪ್ರತಿ ಲೀಟರ್ ನೀರಿಗೆ 5 ಮಿ.ಲೀ. ಪ್ರಮಾಣದಲ್ಲಿ ಏಳು ದಿನಗಳ ಅಂತರದಲ್ಲಿ ಸಿಂಪಡಿಸುವ ಕ್ರಮಗಳನ್ನು ರೈತರ ಜಮೀನಿನಲ್ಲಿ ಅಳವಡಿಸಿ ತೋರಿಸಲಾಯಿತು.

ಸಾಮಾನ್ಯವಾಗಿ ರೈತರು ಅನುಸರಿಸುವ ರಾಸಾಯನಿಕ ಕೀಟನಾಶಕ ಆಧಾರಿತ ಕ್ರಮಗಳಿಗೆ ಹೋಲಿಸಿದರೆ ಪರಿಸರ ಸ್ನೇಹಿ ಸಮಗ್ರ ನಿರ್ವಹಣಾ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡಿದೆ. ಇದರಿಂದ ಕಪ್ಪು ಥ್ರಿಪ್ಸ್ ಕೀಟದ ಬಾಧೆ ಕಡಿಮೆಯಾಗುವುದರೊಂದಿಗೆ ಬೆಳೆ ಆರೋಗ್ಯ ಕಾಪಾಡಲು ಹಾಗೂ ಗುಣಮಟ್ಟದ ಮೆಣಸಿನಕಾಯಿ ಉತ್ಪಾದನೆಗೆ ಸಹಕಾರಿಯಾಗಿದೆ. ಅಲ್ಲದೆ, ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆ ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಸಸ್ಯ ಸಂರಕ್ಷಣೆ) ಡಾ. ಸುಪ್ರಿಯಾ ಎಸ್., ರೈತರು ರಾಸಾಯನಿಕ ಕೀಟನಾಶಕಗಳನ್ನು ಪದೇಪದೇ ಮತ್ತು ಅತಿಯಾಗಿ ಬಳಸುವುದರಿಂದ ಕೀಟಗಳಲ್ಲಿ ಕೀಟನಾಶಕ ಪ್ರತಿರೋಧಕ ಶಕ್ತಿ ಬೆಳೆಯುವ ಸಾಧ್ಯತೆಯಿದೆ. ಇದರಿಂದ ಕೃಷಿ ವೆಚ್ಚವೂ ಹೆಚ್ಚಾಗುತ್ತದೆ. ಆದ್ದರಿಂದ ಜೈವಿಕ ಹಾಗೂ ಸಸ್ಯಜನ್ಯ ಕೀಟ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಮೆಣಸಿನಕಾಯಿ ಉತ್ಪಾದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!