ಬಗರ್ ಹುಕುಂ ದಾಖಲೆಗಾಗಿ ಕಚೇರಿಗೆ ಅಲೆದು ಸುಸ್ತು: ತಹಶೀಲ್ದಾರ್ ಕಚೇರಿ ಎದುರೇ ಗೋಣಿಚೀಲ ಹೊದ್ದು ಮಲಗಿದ ವೃದ್ಧ ರೈತ! ಮಧ್ಯರಾತ್ರಿ ಓಡೋಡಿ ಬಂದ ತಹಶೀಲ್ದಾರ್..!!

ತುಮಕೂರು: ಜಮೀನಿನ ದಾಖಲೆ ಪಡೆಯಲು ದಿನವಿಡೀ ತಹಶೀಲ್ದಾರ್ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ವೃದ್ಧ ರೈತರೊಬ್ಬರು ಕಚೇರಿ ಎದುರೇ ಗೋಣಿಚೀಲ ಹೊದ್ದು ಮಲಗಿದ ಘಟನೆ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದ ರೈತ ನಾಗರಾಜು ಅವರು ತಮಗೆ ಮಂಜೂರಾಗಿದ್ದ ಬಗರ್ ಹುಕುಂ ಜಮೀನಿನ ದಾಖಲೆ ಪಡೆಯಲು ನಿನ್ನೆ ಬೆಳಿಗ್ಗೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸಂಜೆಯೊಳಗೆ ದಾಖಲೆ ನೀಡುವುದಾಗಿ ಕಚೇರಿ ಸಿಬ್ಬಂದಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಸಂಜೆಯಾದರೂ ದಾಖಲೆ ನೀಡದೆ ಸಿಬ್ಬಂದಿ ರೈತನನ್ನು ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದಿನವಿಡೀ ಕಚೇರಿಯಲ್ಲಿ ಕಾಯ್ದು ಸುಸ್ತಾದ ನಾಗರಾಜು ಅವರಿಗೆ ಬೇರೆ ದಾರಿ ಕಾಣದೆ, ರಾತ್ರಿ ತಹಶೀಲ್ದಾರ್ ಕಚೇರಿಯ ಎದುರೇ ಗೋಣಿಚೀಲ ಹೊದ್ದು ಮಲಗಿದ್ದಾರೆ. ಜಮೀನಿನ ದಾಖಲೆಗಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಕೊನೆಗೆ ಕಚೇರಿ ಎದುರೇ ರಾತ್ರಿ ಕಳೆಯುವಂತಾದ ವೃದ್ಧ ರೈತನ ಪರಿಸ್ಥಿತಿ ಸಾರ್ವಜನಿಕರ ಗಮನ ಸೆಳೆದಿದೆ.

ಮಧ್ಯರಾತ್ರಿ ರೈತನ ನೆರವಿಗೆ ಧಾವಿಸಿದ ತಹಶೀಲ್ದಾರ್

ವೃದ್ಧ ರೈತ ಕಚೇರಿ ಎದುರು ಮಲಗಿರುವ ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ನಂದಿನಿ ಅವರು ಮಧ್ಯರಾತ್ರಿಯೇ ಕಚೇರಿಗೆ ಧಾವಿಸಿ ರೈತನ ಸಮಸ್ಯೆಯನ್ನು ಆಲಿಸಿದ್ದಾರೆ. ಕೂಡಲೇ ಜಮೀನಿನ ದಾಖಲೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿ, ರೈತನಿಗೆ ಊಟದ ವ್ಯವಸ್ಥೆ ಮಾಡುವಂತೆಯೂ ತಿಳಿಸಿದ್ದಾರೆ.

ಅಲ್ಲದೆ, ರಾತ್ರಿ ವಾಸ್ತವ್ಯಕ್ಕೆ ತೊಂದರೆಯಾಗದಂತೆ ತಾಲೂಕು ಕಚೇರಿ ಸಿಬ್ಬಂದಿಯೊಬ್ಬರ ಕೊಠಡಿಯಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.

ಒಂದೆಡೆ ದಾಖಲೆ ನೀಡುವ ಭರವಸೆ ನೀಡಿ ರೈತನನ್ನು ದಿನವಿಡೀ ಕಾಯಿಸಿದ ಸಿಬ್ಬಂದಿಯ ನಡೆಗೆ ಅಸಮಾಧಾನ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಮಧ್ಯರಾತ್ರಿಯಾದರೂ ರೈತನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ತಹಶೀಲ್ದಾರ್ ನಂದಿನಿ ಅವರ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಜನರ ಕೆಲಸಗಳು ಸಕಾಲದಲ್ಲಿ ಆಗಬೇಕು ಎಂಬ ನಿರೀಕ್ಷೆಯನ್ನೂ ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ.

Leave a Reply

Your email address will not be published. Required fields are marked *

error: Content is protected !!