ಕೇಂದ್ರದ ಅನುದಾನದ ಬಳಿಕ ಹೆಚ್ಚುವರಿ ಬರ ಪರಿಹಾರ; ಕೃಷಿ ಸಚಿವ ನರೇಂದ್ರ ಸ್ವಾಮಿ ಭರವಸೆ


ರಾಜ್ಯದ ರೈತರಿಗೆ 5 ಸಾವಿರ ರೂ. ಬರ ಪರಿಹಾರ ನೀಡಿದ್ದು, ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಹೆಚ್ಚುವರಿ ಪರಿಹಾರವನ್ನು ಕಂದಾಯ ಇಲಾಖೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಭರವಸೆ ನೀಡಿದರು.

ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಬುಧವಾರ ರೈತ ಮುಖಂಡರ ಅಹವಾಲು ಆಲಿಸಿ‌ ಮಾತನಾಡಿದ ಸಚಿವರು, ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಲು 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ 4,500 ರೂ. ಪ್ರೋತ್ಸಾಹಧನ ನೀಡುವ ‘ನೇಗಿಲ ಯೋಗಿ’ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ.
ಈ ಹಿಂದಿನ ವರ್ಷದ ಬಾಕಿ ಬೆಳೆ ವಿಮೆ ಪಾವತಿಗೆ ಕ್ರಮ ವಹಿಸಲಾಗುವುದು. ಬರದ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಬಾರಿ ವಿಮೆ ನೋಂದಣಿ ಹೆಚ್ಚಿಸಲಾಗಿದೆ. ವಿಮಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸುವ ಕುರಿತು ಮುಂಬರುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಈ ವೇಳೆ ಬೆಳೆ ವಿಮೆಯನ್ನು ಇತರ ಬೆಳೆಗಳಿಗೂ ವಿಸ್ತರಿಸುವಂತೆ ರೈತ ಮುಖಂಡರು ಮನವಿ ಮಾಡಿದರು.

ತಂತ್ರಜ್ಞಾನ ಆಧರಿತ ಕೃಷಿಗೆ ಒತ್ತು ನೀಡಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ‘ರೈತ ಚೈತನ್ಯ’ ಯೋಜನೆ ಜಾರಿಗೆ ತರಲಾಗಿದೆ. ಕಬ್ಬು ಬೆಳೆಗೆ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ವರದಿ ಇನ್ನೂ ಬಂದಿಲ್ಲ. ಕೇಂದ್ರದ ಅನುದಾನವನ್ನು ಆಧರಿಸಿ ಹೆಚ್ಚುವರಿ ದರ ನಿಗದಿಪಡಿಸಲಾಗುವುದು ಎಂದರು.

ಐಟಿ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡವರು ರೈತ ಉತ್ಪಾದಕ ಸಂಸ್ಥೆಗಳನ್ನು (FPO) ರಚಿಸಿಕೊಂಡು ಗುತ್ತಿಗೆ ಕೃಷಿಯಲ್ಲಿ ತೊಡಗಿದ್ದಾರೆ. ಸಣ್ಣ ರೈತರಿಂದ ಕನಿಷ್ಠ 5 ರಿಂದ 20 ವರ್ಷಗಳ ಅವಧಿಗೆ 5,000 ಎಕರೆಗೂ ಅಧಿಕ ಭೂಮಿಯನ್ನು ಗುತ್ತಿಗೆ ಪಡೆದು, ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಬೇಡಿಕೆ ಆಧರಿತ ಬೆಳೆ ಬೆಳೆದು ರಫ್ತು ಮಾಡುತ್ತಿದ್ದಾರೆ. ಇದರಿಂದ ಸಣ್ಣ ರೈತರಿಗೂ ನಿರಂತರ ಆದಾಯ ಸಿಗುತ್ತಿದೆ. ಅಲ್ಲದೆ, ‘ಕೆಪೆಕ್’ ಮೂಲಕ ಆಹಾರ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸರ್ಕಾರ ನೆರವಾಗಲಿದೆ ಎಂದು ತಿಳಿಸಿದರು.

ಮೇವು ವಿತರಣೆ- ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ ರಾಜ್ಯದಲ್ಲಿ ಮೇವಿನ ಕೊರತೆಯಿಲ್ಲ; ಚಾಮರಾಜನಗರದಿಂದ ತಮಿಳುನಾಡು ಮತ್ತು ಕೇರಳಕ್ಕೆ ಮೇವು ಸಾಗಣೆಯಾಗುತ್ತಿದೆ. ಎಲ್ಲಿಯಾದರೂ ಕೊರತೆಯಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದರೆ 48 ಗಂಟೆಗಳೊಳಗೆ ಮೇವು ಪೂರೈಸಲಾಗುವುದು ಎಂದು ರೈತರ ದೂರಿಗೆ ಸಚಿವರು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿದ್ದು, ಇಲಾಖೆಯಿಂದ 30 ಸಾವಿರ ಮೇವಿನ ಕಿಟ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆದರೆ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಜಾನುವಾರುಗಳ ಸಾವಿಗೆ ಪರಿಹಾರವೂ ಸಿಕ್ಕಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು. ಇದರಿಂದ ಅಸಮಾಧಾನಗೊಂಡ ಸಚಿವರು, ರೈತರಿಗೆ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

Leave a Reply

Your email address will not be published. Required fields are marked *

error: Content is protected !!