ಹಳ್ಳಿ ಹಳ್ಳಿಗೂ ನೇಗಿಲ ಯೋಗಿ ಯೋಜನೆ ತಲುಪಿಸಲು ಅಧಿಕಾರಿಗಳಿಗೆ ಕೃಷಿ ಸಚಿವ ಸೂಚನೆ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ನೇಗಿಲ ಯೋಗಿ ಯೋಜನೆಗೆ ಚಾಮರಾಜನಗರ, ಗುಂಡ್ಲುಪೇಟೆ ಆಯ್ಕೆಯಾಗಿದ್ದು, ಮುಂಗಾರಿಗೂ ಮೊದಲೇ ರೈತರಿಗೆ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದ ನೇಗಿಲ ಯೋಗಿ ಯೋಜನೆಯನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು. ಫಸ್ಟ್ ಕಂ ಫಸ್ಟ್ ಸರ್ವ್( ಮೊದಲು ಬಂದವರಿಗೆ ಮೊದಲ ಆದ್ಯತೆ) ಆಧಾರದ ಮೇಲೆ ಸೇವೆ ಒದಗಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಆರ್ ಟಿಒ ನೋಂದಣಿ ಆಗಿರುವ ಒಟ್ಟು 6,108 ಟ್ರಾಕ್ಟರ್ ಗಳಿವೆ. ಸುಮಾರು 2,263 ಟ್ರ್ಯಾಕ್ಟರ್ ಮಾಲೀಕರು ಯೋಜನೆಯಡಿ ನೋಂದಣಿಯಾಗಲು ಒಪ್ಪಿಗೆ ನೀಡಿದ್ದಾರೆ. ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ 66,043 ಸಾವಿರ ರೈತರಿಗೆ ಯೋಜನೆಯಿಂದ ಲಾಭವಾಗಲಿದೆ. ಯೋಜನೆ ಕುರಿತು ರೈತರಿಗೆ ಪ್ರಚಾರ ಮಾಡಲು ಗ್ರೂಪ್ ಕಾಲ್ ಮಾಡುವ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

*ವರವಾಗಲಿದೆ ರೈತ ಚೈತನ್ಯ ಯೋಜನೆ*

ರೈತರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಉಪಗ್ರಹ ಆಧರಿತ ಬೆಳೆ ಮಾಹಿತಿ, ಭೂಮಿಯ ಸತ್ವ, ಹವಾಮಾನ ಮುನ್ಸೂಚನೆ ಇತ್ಯಾದಿ ವಿವರಗಳನ್ನು ರೈತರ ಮೊಬೈಲ್ ಗೆ ನೀಡುವ ರೈತ ಚೈತನ್ಯ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈಗಾಗಲೇ ಲಕ್ಷಾಂತರ ರೈತರಿಗೆ ಬೆಳೆ ಮಾಹಿತಿಯ ಸಂದೇಶ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ, ನಷ್ಟದಿಂದ ಪಾರು ಮಾಡಲು ನೆರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

2026-27‌ರ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ 17,925 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ 9,448 ರೈತರಿಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೋಂದಣಿಯಾಗಿದೆ. ಅನ್ಯ ಕಾರಣಗಳನ್ನು ನೀಡಿ ರೈತರನ್ನು ಪರಿಹಾರದಿಂದ ವಂಚಿಸುವ ವಿಮಾ‌ ಕಂಪನಿಗಳನ್ನು ಕರೆಸಿ, ಎಚ್ಚರಿಕೆ ನೀಡಬೇಕು. ಬರದಲ್ಲಿ ಯಾವುದೇ ಕಾರಣಕ್ಕೂ ಬೆಳೆ ವಿಮೆ ಪಾವತಿ ವಿಳಂಬ ಆಗಬಾರದು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿರುವ ಮಳೆ‌ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದ ಸಚಿವರು, ಕೃಷಿ ಕಾಲೇಜಿನ ಮಾಹಿತಿ ಪಡೆದರು.
ಕೃಷಿ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆಯಿದೆ. ಮುಖ್ಯ ಕಟ್ಟಡ ಇಂದಿಗೂ ಪೂರ್ಣವಾಗಿಲ್ಲ. ಗ್ರಂಥಾಲಯ ಕಟ್ಟಡದಲ್ಲಿ ತರಗತಿಗಳನ್ನು ಮಾಡಲಾಗುತ್ತಿದೆ. ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ಹೌಸಿಂಗ್ ಬೋರ್ಡ್‌ನವರು ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಗಳು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು, ಬೆಳಗಾವಿ ಅಧಿವೇಶನ ಮುಗಿದ ಬಳಿಕ ಖುದ್ದ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

*ರಸಗೊಬ್ಬರ ದಾಸ್ತಾನಿನ ಮೇಲೆ ಕಣ್ಣಿಡಿ*

ಜಿಲ್ಲೆಯಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ‌ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಆಗ ಪ್ರತಿಕ್ರಿಯಿಸಿದ ಸಚಿವರು, ಯೂರಿಯಾ ಕೃತಕ‌ ಅಭಾವ ಸೃಷ್ಟಿಸುವವರ ವಿರುದ್ಧ ನಿಗಾ ವಹಿಸಬೇಕು.ಜೈ ಕಿಸಾನ್ ಆ್ಯಪ್ ನಲ್ಲಿ ಎಲ್ಲವೂ ಅಪ್ ಡೇಟ್‌ ಮಾಡಬೇಕು ಎಂದು ಸೂಚನೆ ನೀಡಿದರು.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸದೇ ಹಲವು ರೈತರು ಸಹಾಯಧನದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ರೈತರು ಸೌಲಭ್ಯದಿಂದ ವಂಚಿತರಾದರು, ಅವರನ್ನು ಮತ್ತೆ ಯೋಜನೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ತಾಲೂಕುವಾರು ಪೊಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತರಾದವರ ವಿವರ ನೀಡಬೇಕು ಎಂದು ಸಚಿವರು ಹೇಳಿದರು.

ಮಣ್ಣು ಸ್ಯಾಂಪಲ್ ಪಡೆದು ೨ ತಿಂಗಳ ಬಳಿಕ ವರದಿ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಪ್ರಸ್ತುತ, ರೈತರಿಗೆ ಯಾವುದರಲ್ಲೂ ಆದಾಯ ಇಲ್ಲ, ಹಣ ಕೊಟ್ಟು ಸೇವೆ ಪಡೆಯಲು ಆಗುತ್ತಿಲ್ಲ. ಜಿಲ್ಲೆಗೆ 15 ಲಕ್ಷ ರೂ. ಗಳನ್ನು ಮಣ್ಣು ಪರೀಕ್ಷೆಗೆ ಭರಿಸಲು ಅಭ್ಯಂತರವೇನಿಲ್ಲ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ನರೇಂದ್ರ ಸ್ವಾಮಿ ಅವರು ತಿಳಿಸಿದರು.

ಹನಿ ನೀರಾವರಿ ಹಾಗೂ ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಲ್ಲಿ ಯೋಜನೆ ಹಾಗೂ ಸವಲತ್ತು ಓವರ್ ಲ್ಯಾಪ್ ಆಗದಂತೆ ನೋಡಿಕೊಳ್ಳಬೇಕು.
ಜಲಾನಯನ ಪ್ರದೇಶದ ಚಟುವಟಿಕೆಗಳು ಹಾಗೂ ವಿಬಿಜಿ ರಾಮ್ ಜಿ ಯೋಜನೆಯನ್ನು ಸಮರ್ಪಕವಾಗಿ ಬಳಸಬೇಕು‌ ಎಂದು ಹೇಳಿದರು.

ಮೇವಿನ ದಾಸ್ತಾನಿಗೆ ಸೂಚನೆ
ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಬರದಲ್ಲಿ ಮೇವು ಪೂರೈಕೆ ಹಾಗೂ ರೋಗ ಹರಡದಂತೆ ನೋಡಿಕೊಳ್ಳಬೇಕು.‌ ಪ್ರತಿ ಗ್ರಾಮದಲ್ಲಿ ನೀರಿನ‌ ತೊಟ್ಟಿಗಳನ್ನು‌ ನಿರ್ಮಾಣ‌ ಮಾಡಬೇಕು‌ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಆದಾಯ ತಂದುಕೊಡುವ ತೇಗ ಸಿರಿ ಯೋಜನೆಗೆ ಹೆಚ್ಚು ಉತ್ತೇಜನ ನೀಡಬೇಕು. ರಸ್ತೆ ಬದಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ತೇಗದ ಸಸಿ ನೆಡಬೇಕು.‌ ಈ ಯೋಜನೆಯಲ್ಲಿ ಶೇ 70 ರಷ್ಟು ಸರ್ಕಾರಕ್ಕೆ, ಶೇ30 ರಷ್ಟು ರೈತರಿಗೆ ಆದಾಯ ಹಂಚಿಕೆಯಾಗಲಿದೆ ಎಂದು ಸಚಿವರು ಹೇಳಿದರು. ಈ ಬಗ್ಗೆ ಸಭೆ ನಡೆಸಿ, ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!