ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: 2 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎಸ್ ಡಿಎ ಸಿಬ್ಬಂದಿ

ಬೆಳಗಾವಿ: ಸರ್ಕಾರಿ ಕೆಲಸ ಮಾಡಿಕೊಡುವ ನೆಪದಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಉಪವಿಭಾಗಾಧಿಕಾರಿಗಳ (ಎಸಿ) ಕಚೇರಿಯ ಎಸ್‌ಡಿಎ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಪದ್ಮಾಕರ್ ಪಾಟೀಲ್ ಎಂಬ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ದೂರುದಾರ ಶುಭಂ ಅಪ್ಪಾರಾವ್ ಅವರಿಗೆ ಸಂಬಂಧಿಸಿದ 37 ಪ್ರಕರಣಗಳನ್ನು ಎಸಿ ನ್ಯಾಯಾಲಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸಿಬ್ಬಂದಿ 30 ಸಾವಿರ ಲಂಚ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಈ ಪೈಕಿ ಮೊದಲ ಹಂತವಾಗಿ 2 ಸಾವಿರ ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಲಂಚದ ಬೇಡಿಕೆಯಿಂದ ಬೇಸತ್ತ ದೂರುದಾರರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ದೂರನ್ನು ಆಧರಿಸಿ ಕಾರ್ಯಾಚರಣೆಗೆ ಮುಂದಾದ ಅಧಿಕಾರಿಗಳು, ಎಸಿ ಕಚೇರಿಯಲ್ಲಿಯೇ ಹಣ ಪಡೆಯುತ್ತಿದ್ದ ವೇಳೆ ಸಿಬ್ಬಂದಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಸಿಬ್ಬಂದಿ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಸರ್ಕಾರಿ ಕಚೇರಿಗಳಲ್ಲೇ ಲಂಚದ ಬೇಡಿಕೆ ಇಡುತ್ತಿರುವ ಆರೋಪಗಳು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಬೆಳಗಾವಿಯಲ್ಲಿ ನಡೆದ ಈ ಲೋಕಾಯುಕ್ತ ಕಾರ್ಯಾಚರಣೆ ಸರ್ಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!