
ದೊಡ್ಡಬಳ್ಳಾಪುರ: ಬಿಲ್ಡಿಂಗ್‌ಗೆ ಪೇಂಟ್ ಮಾಡಲು ಬಂದಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಿಹಳ್ಳಿ ಸಮೀಪದ ಎಸ್.ಜಿ.ಎಸ್. ಬಡಾವಣೆಯಲ್ಲಿ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿ ಚಂದನ್ (35) ಎಂದು ಗುರುತಿಸಲಾಗಿದೆ.
ಚಂದನ್ ಅವರು ಬಿಲ್ಡಿಂಗ್‌ಗೆ ಪೇಂಟ್ ಮಾಡುವ ಕೆಲಸಕ್ಕಾಗಿ ಬಂದಿದ್ದರು. ಆಕಸ್ಮಿಕವಾಗಿ ಆಯತಪ್ಪಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೆಳಗೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ ಬಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವು ಸಂಭವಿಸಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.