ತಂದೆಯಿಂದಲೇ ಮಗನ ಕೊಲೆ: ಮಗನ ಕೊಲೆ ಆರೋಪಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿತ; ಪೊಲೀಸ್ ಜೀಪಿನಿಂದ ಎಳೆದು ಹಲ್ಲೆ

ಕುಣಿಗಲ್, ನ.15: ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತಂದೆಯೇ ತನ್ನ 16 ವರ್ಷದ ಮಗನನ್ನು ಹಾರೆಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಮಗನ ಕೊಲೆ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಆರೋಪಿಯನ್ನು ಪೊಲೀಸ್ ಜೀಪಿನಿಂದಲೇ ಹೊರಗೆಳೆದು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೂಡ ನಡೆದಿದೆ.

ಗ್ರಾಮದ ನಿವಾಸಿ ನಂಜೇಗೌಡ (45) ಎಂಬಾತ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ರಂಜಿತಾ ಅವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ತಾಯಿಯ ಜಗಳ ಬಿಡಿಸಲು ಬಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸುನಿಲ್ (16) ಅಡ್ಡ ಬಂದಿದ್ದಾನೆ. ಇದರಿಂದ ಕೋಪಗೊಂಡ ತಂದೆ ಮನೆಯಲ್ಲಿದ್ದ ಹಾರೆಕೋಲಿನಿಂದ ಮಗನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಸುನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕುಣಿಗಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾಧವ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ನಂಜೇಗೌಡನನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಗನನ್ನೇ ಕೊಲೆ ಮಾಡಿದ ಆರೋಪದಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರನ್ನು ತಡೆದು ಗಲಾಟೆ ನಡೆಸಿದ್ದಾರೆ. ಬಳಿಕ ಪೊಲೀಸ್ ಜೀಪಿನಿಂದ ಆರೋಪಿಯನ್ನು ಹೊರಗೆಳೆದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರ ಹಲ್ಲೆಯಿಂದ ನಂಜೇಗೌಡ ಪ್ರಜ್ಞೆ ತಪ್ಪಿ ಬಿದ್ದಿದ್ದು, ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕೊನೆಗೆ ಗ್ರಾಮಸ್ಥರ ಹಲ್ಲೆಯಿಂದ ಆರೋಪಿಯನ್ನು ರಕ್ಷಿಸಿದ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮೃತ ಸುನಿಲ್‌ಗೆ ಕುಶಲ್ ಎಂಬ ಮತ್ತೊಬ್ಬ ಸಹೋದರನಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!