ಕೇಳಚಂದ್ರ ಪ್ರತಿಷ್ಠಾನದಿಂದ ಯುವಜನತೆಗೆ ಎಐ ಕೌಶಲ್ಯ ತರಬೇತಿ:*ಕೌಶಲ್ಯ ಹೊಂದಿದ ಯುವಜನತೆಗೆ ಪ್ರಮಾಣಪತ್ರ ವಿತರಿಸಿದ ಸುಜಾ ಜಾರ್ಜ್

ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಕೌಶಲ್ಯವೇ ಯಶಸ್ಸಿನ ಫಾರ್ಮುಲಾ ಆಗಿದ್ದು, ಕೆಳಚಂದ್ರ ಪ್ರತಿಷ್ಠಾನ ಎಐ ಕೌಶಲ್ಯ ಕೋರ್ಸ್‌ ಆರಂಭಿಸುವ ಮೂಲಕ ನಾವು ರೇಸ್‌ನಲ್ಲಿದ್ದೇವೆ ಎಂದು ಘೋಷಿಸುತ್ತಿರುವುದಾಗಿ ಕೇಳಚಂದ್ರ ಪ್ರತಿಷ್ಠಾನದ ಟ್ರಸ್ಟಿಯೂ ಆಗಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವರ ಪತ್ನಿ ಸುಜಾ ಜಾರ್ಜ್ ಹೇಳಿದ್ದಾರೆ.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಜೀವನಹಳ್ಳಿಯ ಕೇಳಚಂದ್ರ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ 15ನೇ ಮತ್ತು 16ನೇ ಬ್ಯಾಚ್‌ಗಳಲ್ಲಿ ಡೇಟಾ ಎಂಟ್ರಿ, ಎಲೆಕ್ಟ್ರಿಷಿಯನ್ ಹಾಗೂ ಮೊಬೈಲ್ ರಿಪೇರಿ ಕೌಶಲ್ಯ ತರಬೇತಿ ಪಡೆದ 68 ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪ್ರಮಾಣಪತ್ರಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು.

ಕೇಳಚಂದ್ರ ಪ್ರತಿಷ್ಠಾನ ಹಾಗೂ ಕೌಶಲ್ಯದ ಮಹತ್ವ ತಿಳಿಸಿದ ಅವರು, “ಯುವಜನತೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಕೌಶಲ್ಯಾಧಾರಿತ ತರಬೇತಿಯ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವುದು ಹಾಗೂ ಸಮಾಜದ ಎಲ್ಲ ವರ್ಗಗಳಿಗೂ ಅಗತ್ಯ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಕೇಳಚಂದ್ರ ಫೌಂಡೇಶನ್ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೇ ಭಾಗವಾಗಿ ಕ್ಯಾನ್ವ ಬೇಸಿಕ್ ಕೋರ್ಸ್‌ ಹಾಗೂ ವಿಡಿಯೋ ಎಡಿಟಿಂಗ್ ಕೋರ್ಸ್‌ ಆರಂಭಿಸಲು ಸಿದ್ಧವಾಗಿದೆ. ಈ ಕೋರ್ಸ್‌ಗಳು ಹೊಸ ತಲೆಮಾರಿನ ಕೌಶಲ್ಯ ತರಬೇತಿಗೆ ಮುನ್ನಡಿ ಬರೆಯಲಿದೆ”, ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಸರ್ವಜ್ಞನಗರ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್‌ ಅವರ ಮಾರ್ಗದರ್ಶನದಲ್ಲಿ ಹಾಗೂ ಕೇಳಚಂದ್ರ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ರಾಣಾ ಜಾರ್ಜ್‌ ಅವರ ನೇತೃತ್ವದಲ್ಲಿ ಕೌಶಲ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗಿಂತಲೂ ವಿಭಿನ್ನವಾಗಿದೆ. ಶಿಕ್ಷಣ, ಕೌಶಲ್ಯ ಹಾಗೂ ಆರೋಗ್ಯ ಇಲ್ಲಿ ಅಭಿವೃದ್ದಿಯ ಸೂಚಕಗಳೇ ಆಗಿವೆ. ಕೌಶಲ್ಯ ಕೇಂದ್ರವು 850ಕ್ಕೂ ಹೆಚ್ಚು ಯುವಜನರಿಗೆ ವಿವಿಧ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ನೀಡಿದ್ದು, ಅವರ ಉದ್ಯೋಗಾವಕಾಶ ಮತ್ತು ಸ್ವಾವಲಂಬನೆಗೆ ನೆರವಾಗಿದೆ. ಈ ಮೂಲಕ ನಮ್ಮ ನಾಡಿಗೆ ಹಾಗೂ ದೇಶಕ್ಕೆ ಕೌಶಲ್ಯಭರಿತ ಯುವಜನತೆಯನ್ನು ಕೊಡುಗೆಯಾಗಿ ನೀಡುತ್ತಿದೆ,” ಎಂದರು.

*ಉಚಿತ ಆರೋಗ್ಯ ತಪಾಸಣಾ ಶಿಬಿರ*

ಇದೇ ಸಂದರ್ಭದಲ್ಲಿ ಜೀವನಹಳ್ಳಿಯ ಕೇಳಚಂದ್ರ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಕೇಳಚಂದ್ರ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಶಿಬಿರದಲ್ಲಿ 120ಕ್ಕೂ ಹೆಚ್ಚು ಮಂದಿ ವಿವಿಧ ಆರೋಗ್ಯ ಸೇವೆಗಳನ್ನು ಪಡೆದುಕೊಂಡರು. 109 ಮಂದಿಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು. 81 ಮಂದಿಗೆ ದೃಷ್ಟಿ ಪರೀಕ್ಷೆಯ ಆಧಾರದ ಮೇಲೆ ಕನ್ನಡಕಗಳನ್ನು ವಿತರಿಸಲಾಯಿತು. ಹೆಚ್ಚಿನ ವೈದ್ಯಕೀಯ ಸಮಾಲೋಚನೆ ಮತ್ತು ಚಿಕಿತ್ಸೆಯ ಅಗತ್ಯವಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಕೆ.ಜಿ. ಹಳ್ಳಿಯ ಕೆಳಚಂದ್ರ ಆರೋಗ್ಯ ಕೇಂದ್ರದಲ್ಲಿ ಸೇವೆ ಪಡೆಯಲು ಶಿಫಾರಸು ಮಾಡಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಸುಜಾ ಜಾರ್ಜ್ ಅವರು, ಸಮುದಾಯದ ಆರೋಗ್ಯ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪ್ರತಿಷ್ಠಾನ ಇಂತಹ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರುಗಳಾದ ರಘು ದೇವರಾಜ್, ಸುಮಿತ್ರಾ ಮುನಿಕೃಷ್ಣ, ಎಚ್.ಎ. ಪುಲಿಕೇಶಿ, ಬಿಡಿಎ ಸದಸ್ಯ ಬಿ.ಎನ್.ಆರ್. ಅಮರನಾಥ್, ಕೇಳಚಂದ್ರ ಪ್ರತಿಷ್ಠಾನದ ನಿರ್ದೇಶಕಿ ಡಾ. ತ್ರಿವೇಣಿ ಬಿ.ಎಸ್., ಜೀವನಹಳ್ಳಿ ಕೇಳಚಂದ್ರ ಕೌಶಲ್ಯಾಭಿವೃದ್ಧಿ ಕೇಂದ್ರದ ಮುಖ್ಯಸ್ಥೆ ಲತಾ ಗಣೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!