ದೀಪಾವಳಿ ವೇಳೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ: ಹಸಿರು ಪಟಾಕಿ ಬಳಕೆ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಗೋದಾಮು ಮುಟ್ಟುಗೋಲು, ಕ್ರಿಮಿನಲ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

2026ರ ನವೆಂಬರ್ 8ರಿಂದ 10ರವರೆಗೆ ರಾಜ್ಯಾದ್ಯಂತ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು, ಪಟಾಕಿಗಳಿಂದ ಉಂಟಾಗುವ ಶಬ್ದ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸಿ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಅಕ್ಟೋಬರ್ 29ರಂದು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಚಿವರು ಟಿಪ್ಪಣಿ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪಟಾಕಿ ಸಿಡಿಸಲು ರಾತ್ರಿ 8ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಈ ಆದೇಶವನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳ ಗಮನಕ್ಕೆ ತಂದು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರಿಕರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು. ಈ ತಂಡವು ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಹೊರತುಪಡಿಸಿ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಕ್ಯೂಆರ್ ಕೋಡ್ ಇಲ್ಲದ ಪಟಾಕಿ ವಶಕ್ಕೆ

ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿಯ ಗುರುತು ಮತ್ತು ಕ್ಯೂಆರ್ ಕೋಡ್ ಕಡ್ಡಾಯವಾಗಿರುತ್ತದೆ. ಈ ಗುರುತಿನ ಬಗ್ಗೆ ಜಿಲ್ಲಾ ಪರಿಸರ ಅಧಿಕಾರಿಗಳಿಂದ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಗುರುತು ಮತ್ತು ಕ್ಯೂಆರ್ ಕೋಡ್ ಇಲ್ಲದ ಪಟಾಕಿಗಳನ್ನು ಹಸಿರು ಪಟಾಕಿಗಳೆಂದು ಪರಿಗಣಿಸದೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟಾಕಿ ಸಿಡಿಸುವಾಗ ಮಕ್ಕಳು, ವೃದ್ಧರು, ಪ್ರಾಣಿ ಮತ್ತು ಪಕ್ಷಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ನಿಷೇಧಿತ ಪ್ರದೇಶಗಳ ಸುತ್ತಮುತ್ತ ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸಲು ಅಥವಾ ಬಳಸಲು ಅವಕಾಶ ನೀಡಬಾರದು. ಈ ನಿಯಮಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಗಡಿಗಳಲ್ಲಿ ನಿಷೇಧಿತ ಪಟಾಕಿಗಳ ಸಾಗಾಟಕ್ಕೆ ಕಡಿವಾಣ

ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಮೆಟ್ರೋ, ರೈಲು, ಬಸ್ ನಿಲ್ದಾಣಗಳು ಹಾಗೂ ಮಾಲ್‌ಗಳಲ್ಲಿ ಕರಪತ್ರ, ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು. ಸ್ಥಳೀಯ ಟಿವಿ ಮತ್ತು ರೇಡಿಯೋಗಳಲ್ಲಿಯೂ ವಿಡಿಯೋ ಹಾಗೂ ಆಡಿಯೋ ಸಂದೇಶಗಳನ್ನು ಪ್ರಸಾರ ಮಾಡಬೇಕು. ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಹೊರರಾಜ್ಯಗಳಿಂದ ಅಕ್ರಮವಾಗಿ ನಿಷೇಧಿತ ಪಟಾಕಿಗಳನ್ನು ಸಾಗಾಟ ಮಾಡುವುದನ್ನು ತಡೆಯಲು ರಾಜ್ಯದ ಗಡಿಗಳಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ತನಿಖಾ ಠಾಣೆಗಳಲ್ಲಿ ತಪಾಸಣೆ ನಡೆಸಬೇಕು. ನಿಷೇಧಿತ ಪಟಾಕಿ ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಸಾಗಾಟಕ್ಕೆ ಬಳಸುವ ವಾಹನಗಳನ್ನೂ ವಶಪಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಕಾರ ಪಡೆಯಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!