68 ಎಕರೆಗೂ ಅಧಿಕ ಸರ್ಕಾರಿ ಜಮೀನಿನ ಅಕ್ರಮ ಖಾತೆ ಬದಲಾವಣೆ ಆರೋಪ: ಹಿಂದಿನ ಎಸಿ ದುರ್ಗಶ್ರೀ ವಿರುದ್ಧ ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ದೇವನಹಳ್ಳಿ ತಾಲ್ಲೂಕಿನ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ 68 ಎಕರೆ 35 ಗುಂಟೆಗೂ ಅಧಿಕ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್. ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಮೂರು ಗ್ರಾಮಗಳ ಒಟ್ಟು 87 ಸರ್ವೆ ನಂಬರ್‌ಗಳಲ್ಲಿನ 68 ಎಕರೆ 35 ಗುಂಟೆ 08 ಆಣೆ ವಿಸ್ತೀರ್ಣದ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ಭೂಸುರಕ್ಷಾ ಆರ್‌ಟಿಸಿ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗಿದೆ. ಬಳಿಕ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶಗಳನ್ನು ಆಧಾರವಾಗಿಟ್ಟುಕೊಂಡು ಖಾತೆ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಅಕ್ರಮ ಖಾತೆ ಬದಲಾವಣೆ ಪ್ರಕರಣದಲ್ಲಿ ಹಿಂದಿನ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್. ಅವರ ಪಾತ್ರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಆಯುಕ್ತಾಲಯದ ಮೂಲಕ ನಿರ್ದೇಶನ ನೀಡಿದ್ದರು.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಅವರು ಅ.29ರಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್ ಟಿ.ಆರ್. ಅವರಿಗೆ ಪತ್ರ ಬರೆದು, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ನೀಡಲಾದ ದೂರಿನ ಮೇರೆಗೆ ಅ.29ರಂದು ಸಂಜೆ 7.45ರ ಸಮಯದಲ್ಲಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದುರ್ಗಶ್ರೀ ಎನ್. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 318(4), 335, 337, 340(2), 341 ಹಾಗೂ 3(5)ರ ಅಡಿಯಲ್ಲಿ ಠಾಣಾ ಮೊಕದ್ದಮೆ ಸಂಖ್ಯೆ 126/2026 ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೆಚ್ಚಿ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

Leave a Reply

Your email address will not be published. Required fields are marked *

error: Content is protected !!