
ನೆಲಮಂಗಲ: ನಗರದ ವೀವರ್ಸ್ ಕಾಲೋನಿಯ ಮಾರುತಿ ನಗರದಲ್ಲಿ ಕಸ ತೆರವು ವಿಚಾರವಾಗಿ ಮಹಿಳೆ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ ನಡೆದಿದ್ದು, ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡ್ ನಂ. 14ರ ವ್ಯಾಪ್ತಿಯಲ್ಲಿ ರಾಜಕಾಲುವೆ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರೊಂದಿಗೆ ಮಹಿಳೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ತಮ್ಮ ಮನೆಯ ಮುಂದೆ ಕಸ ತೆರವುಗೊಳಿಸುವಂತೆ ಮಹಿಳೆ ಒತ್ತಾಯಿಸಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.

ಈ ವೇಳೆ ಮಹಿಳೆ ಪೌರ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಪೌರ ಕಾರ್ಮಿಕರು ಮಹಿಳೆಯ ಮನೆಯ ಮುಂದೆ ಟ್ರ್ಯಾಕ್ಟರ್‌ನಿಂದ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಹಾಗೂ ಅದಕ್ಕೆ ಪ್ರತಿಯಾಗಿ ಮನೆಯ ಮುಂದೆ ಕಸ ಸುರಿದಿರುವ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.