
ಜಿಲ್ಲೆಯಲ್ಲಿ ಇತ್ತೀಚೆಗೆ ವಾಹನಗಳ ಟೈರ್ಗಳು ಪಂಕ್ಚರ್ ಆಗುವ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿವೆ. ರಸ್ತೆಗಳಲ್ಲಿ ಮೊಳೆ ಹಾಗೂ ಮೊನಚಾದ ಕಬ್ಬಿಣದ ಚೂರುಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳನ್ನು ಉದ್ದೇಶಪೂರ್ವಕವಾಗಿ ಪಂಕ್ಚರ್ ಮಾಡಿ ಹಣ ಗಳಿಸುವ ಗುಪ್ತ ದಂಧೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು ಅನುಮಾನಾಸ್ಪದ ಪಂಕ್ಚರ್ ಅಂಗಡಿಗಳ ಮೇಲೆ ನಿಗಾ ಇರಿಸುವುದರ ಜತೆಗೆ, ಕೆಲವು ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ರಸ್ತೆಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ಮತ್ತು ಸರಕು ಸಾಗಣೆ ವಾಹನಗಳ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ರಾಜ್ಯ ಹೆದ್ದಾರಿಗಳಲ್ಲಿ ಹಂಪ್ಸ್ಗಳ ಬಳಿ ಇಂತಹ ಚೂಪಾದ ವಸ್ತುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರು ಪದೇಪದೇ ಪಂಕ್ಚರ್ ಸಮಸ್ಯೆಗೆ ಸಿಲುಕಿ ಹಣ ಮತ್ತು ಸಮಯ ಕಳೆದುಕೊಳ್ಳುತ್ತಿದ್ದಾರೆ.
ರಸ್ತೆಗಳಲ್ಲಿ ಮೊಳೆಗಳ ಬಲೆ?
ವಾಹನಗಳ ಟೈರ್ಗಳಿಗೆ ಮೊಳೆ ಹಾಗೂ ಮೊನಚಾದ ಕಬ್ಬಿಣದ ಚೂರುಗಳು ಚುಚ್ಚಿಕೊಳ್ಳುತ್ತಿರುವುದರಿಂದ ಪಂಕ್ಚರ್ ಸಮಸ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಹಂಪ್ಸ್ಗಳ ಬಳಿ ವಾಹನಗಳ ವೇಗ ಕಡಿಮೆಯಾಗುವ ಸಂದರ್ಭದಲ್ಲಿ ಇಂತಹ ವಸ್ತುಗಳು ಟೈರ್ಗಳಿಗೆ ಚುಚ್ಚಿಕೊಳ್ಳುತ್ತಿವೆ ಎಂಬ ದೂರುಗಳಿವೆ.
ಕೆಲವು ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹರಡಿ ವಾಹನಗಳನ್ನು ಪಂಕ್ಚರ್ ಮಾಡಲಾಗುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ವಾಹನ ಪಂಕ್ಚರ್ ಆದಾಗ ಸಮೀಪದ ಅಂಗಡಿಗೆ ತೆರಳಿ ದುರಸ್ತಿ ಮಾಡಿಸುವುದು ಅನಿವಾರ್ಯವಾಗುತ್ತದೆ. ಈ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುವ ಉದ್ದೇಶದಿಂದ ಇಂತಹ ಕೃತ್ಯಗಳು ನಡೆಯುತ್ತಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ.
ಇದು ಕೇವಲ ಹಣಕಾಸಿನ ನಷ್ಟದ ಸಮಸ್ಯೆಯಲ್ಲ. ವೇಗವಾಗಿ ಚಲಿಸುವ ವಾಹನದ ಟೈರ್ಗೆ ಹಾನಿಯಾದರೆ ಚಾಲಕನ ನಿಯಂತ್ರಣ ತಪ್ಪಿ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ, ಪಂಕ್ಚರ್ ಪ್ರಕರಣಗಳ ಹಿಂದಿನ ಕಾರಣ ಪತ್ತೆಹಚ್ಚುವುದರ ಜತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ.
ಪಂಕ್ಚರ್ ಅಂಗಡಿಗಳ ಮೇಲೆ

ರಸ್ತೆಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಬಿದ್ದಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಪಂಕ್ಚರ್ ಅಂಗಡಿಗಳ ಚಟುವಟಿಕೆಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಹೊಸಕೋಟೆ ಉಪವಿಭಾಗದ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಪಂಕ್ಚರ್ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.
ರಾಜ್ಯ ಹೆದ್ದಾರಿಯಲ್ಲೂ ಸಮಸ್ಯೆ
ಬೆಂಗಳೂರು–ಗೌರಿಬಿದನೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಅಪಘಾತ ತಡೆಯುವ ಉದ್ದೇಶದಿಂದ ಹಂಪ್ಸ್ಗಳನ್ನು ಅಳವಡಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಕಂಡುಬರುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗಿದೆ.
ಗುಜರಿ ವಾಹನಗಳಲ್ಲಿ ಕಬ್ಬಿಣದ ಚೂರುಗಳನ್ನು ಸಾಗಿಸುವಾಗ ಅವು ರಸ್ತೆಗೆ ಬೀಳುತ್ತಿವೆಯೇ ಎಂಬುದನ್ನೂ ಪರಿಶೀಲಿಸಬೇಕಿದೆ. ಹೆದ್ದಾರಿ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಬಿದ್ದಿರುವ ಚೂಪಾದ ವಸ್ತುಗಳನ್ನು ತಕ್ಷಣ ತೆರವುಗೊಳಿಸುವುದರ ಜತೆಗೆ, ಅವು ರಸ್ತೆಗಳಿಗೆ ಬೀಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮೊಳೆಗಳನ್ನು ಹರಡಿ ವಾಹನಗಳಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಈ ಹಿಂದೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಪಂಕ್ಚರ್ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡುವುದರ ಜತೆಗೆ, ಇಂತಹ ಕೃತ್ಯಗಳ ಹಿಂದಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ರಸ್ತೆಗಳಲ್ಲಿ ಮೊಳೆಗಳನ್ನು ಹರಡಿ ವಾಹನಗಳಿಗೆ ಹಾನಿ ಉಂಟುಮಾಡುವವರ ಬಗ್ಗೆ ನಿಗಾ ವಹಿಸಲಾಗಿದೆ. ಈ ಸಂಬಂಧ ಪಂಕ್ಚರ್ ಅಂಗಡಿಗಳಿಗೂ ನೋಟಿಸ್ ನೀಡಲಾಗಿದೆ. ಇಂತಹ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಕೋಟೆ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಮಲ್ಲೇಶ್ ಹೇಳಿದ್ದಾರೆ.
ರಸ್ತೆಗಳಲ್ಲಿ ರಾಶಿ ರಾಶಿಯಾಗಿ ಮೊನಚಾದ ಕಬ್ಬಿಣದ ಚೂರುಗಳು ಹಾಗೂ ಮೊಳೆಗಳು ಬೀಳುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುವುದು. ಪಂಕ್ಚರ್ ಅಂಗಡಿಗಳ ಮೇಲೆ ನಿಗಾ ಇರಿಸಲಾಗಿದ್ದು, ಬೀಟ್ ಪೊಲೀಸ್ ವ್ಯವಸ್ಥೆಯ ಮೂಲಕ ಅಂಗಡಿ ಮಾಲೀಕರಿಗೆ ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ತಿಳಿಸಿದ್ದಾರೆ.