
ಪೆನ್ ಡ್ರೈವ್…….
ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ……
ಬರಗಾಲ – ರೈತರ ಸಮಸ್ಯೆ – ಪೆನ್ ಡ್ರೈವ್ ಮತ್ತು ಸೆಕ್ಸ್. ಯಾವುದು ನಮ್ಮ ಆದ್ಯತೆಯಾಗಬೇಕು…….
ರಾಜ್ಯದಲ್ಲಿ ಭೀಕರ ಬರಗಾಲ. ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ ಅಂದರೆ ನಾವೆಲ್ಲರೂ ಎಂತಹ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ನಾವೇ ಮರೆಯುತ್ತಿದ್ದೇವೆ ಅಥವಾ ನಿರ್ಲಕ್ಷಿಸುತ್ತಿದ್ದೇವೆ…..
ಚುನಾವಣೆಗಳು, ಪರೀಕ್ಷಾ ಫಲಿತಾಂಶಗಳು, ಷೇರು ಮಾರುಕಟ್ಟೆ, ಬಂಗಾರದ ಬೆಲೆ, ಧಾರ್ಮಿಕ ಆಚರಣೆಗಳು, ಭ್ರಷ್ಟಾಚಾರ ಇದೆಲ್ಲವೂ ತದನಂತರ. ಮೊದಲು ಬದುಕು ಮುಖ್ಯವಲ್ಲವೇ, ಬದುಕೇ ಇಲ್ಲದೆ, ಆರೋಗ್ಯವೇ ಇಲ್ಲದ ಮೇಲೆ ಉಳಿದ ವಿಷಯಗಳನ್ನು ಚರ್ಚಿಸುವುದಾದರೂ ಹೇಗೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಎಷ್ಟೋ ಕೆರೆಕಟ್ಟೆಗಳು ಒಣಗಿವೆ, ಕುಡಿಯಲು ಮನುಷ್ಯರಿಗೂ, ದನ ಕರುಗಳಿಗೂ, ಕಾಡುಪ್ರಾಣಿಗಳಿಗೂ ನೀರೇ ಇಲ್ಲ. ಬೆಳೆಗಳು ಸಂಪೂರ್ಣ ಒಣಗಿ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳ, ಸರ್ಕಾರಗಳ, ಆದ್ಯತೆ ಏನಾಗಿದೆ ಎಂಬುದೇ ನಾಚಿಕೆಗೇಡಿನ ವಿಷಯವಾಗಿದೆ….
ಮಾನನಷ್ಟ – ಮಾನಹಾನಿ – ಸೇಡು – ಅಸೂಯೆ – ಆರೋಪ – ದ್ವೇಷ – ಸೀಡಿ – ಪೆನ್ ಡ್ರೈವ್ – ಕಾಮಪುರಾಣ ಇವುಗಳ ನಡುವೆ, ಮರೆಯಾಗುತ್ತಿರುವ ಪರಿಸರ, ಆರೋಗ್ಯ, ಮಾನ ಮರ್ಯಾದೆ, ಜೀವ ಹಾನಿ, ಸರ್ಕಾರ, ಮಾಧ್ಯಮಗಳ ಮತ್ತು ಜನಸಾಮಾನ್ಯರ ಅರಿವಿಗೆ ಬರುತ್ತಿಲ್ಲ ಎಂದು ಕಾಣುತ್ತದೆ….
ಜೀವವಿದ್ದರೆ ಜೀವನ, ಜೀವನವಿದ್ದರೆ ಮಾನ ಮರ್ಯಾದೆ. ಈಗ ಜೀವಕ್ಕೇ ಕುತ್ತು ತರುತ್ತಿರುವ ಬರಗಾಲ, ಅತಿಯಾದ ತಾಪಮಾನವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಅಭಿವೃದ್ಧಿಯ, ಹಣದ ಅಹಂಕಾರ ನಮ್ಮನ್ನು ದಾರಿತಪ್ಪುವಂತೆ ಮಾಡುತ್ತಿದೆ…..
ಬದಲಾವಣೆ, ಪರಿವರ್ತನೆ, ಸರಿದಾರಿ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ತಪ್ಪು ಸರಿಯ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುತ್ತಾ ವಿಷಯಗಳನ್ನು ಗೊಂದಲಗೊಳಿಸುತ್ತಾ, ನೈತಿಕ – ಅನೈತಿಕತೆಯ ಬಗ್ಗೆ ಒಬ್ಬೊಬ್ಬರು ಅವರವರ ದೃಷ್ಟಿಕೋನದಲ್ಲಿ ಮಾತನಾಡಿಕೊಳ್ಳುತ್ತಾ, ಕಾನೂನು ಮತ್ತು ಪ್ರಾಕೃತಿಕ ಸಹಜತೆಯನ್ನು ಸಂಪೂರ್ಣ ದಿಕ್ಕು ತಪ್ಪಿಸುತ್ತಿದ್ದಾರೆ……..
ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಈ ಮೊಬೈಲ್ ಕ್ಯಾಮೆರಾ ಅಥವಾ ಹಿಡನ್ ಕ್ಯಾಮೆರಾ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಅದರ ಒಳ್ಳೆಯ ಉಪಯೋಗಗಳು ಸಾಕಷ್ಟು ಇದೆ. ಅದನ್ನು ಇಲ್ಲಿ ವಿವರಿಸುವ ಅವಶ್ಯಕತೆ ಇಲ್ಲ. ಹಾಗೆಯೇ ಅದರ ದುರುಪಯೋಗಗಳು ಸಹ ಸಾಕಷ್ಟು ಇವೆ. ಆದರೆ ಜನರ ಮುಖವಾಡಗಳನ್ನು ಬಯಲು ಮಾಡುವ ಒಂದು ಸಾಧನವಾಗಿ ಕ್ರಾಂತಿಕಾರಕವಾಗಿ ಈ ಕ್ಯಾಮರಾಗಳು ಕೆಲಸ ಮಾಡುತ್ತಿರುವುದಂತೂ ನಿಜ. ಹಾಗೆಂದು ಅಪರಾಧಗಳೇನು ಕಡಿಮೆಯಾಗಿಲ್ಲ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತಿದೆ…….
ಆದರೆ ಅಂತಿಮವಾಗಿ ಜೊಳ್ಳು ಮತ್ತು ಕಾಳುಗಳ ವಿಂಗಡಣೆ ಈ ಕ್ಯಾಮರಾಗಳಿಂದ ಸಾಧ್ಯವಾಗಬಹುದೇ, ಹಾಗಾಗಬೇಕಾದರೆ ಮಾನನಷ್ಟ, ಮಾನಹಾನಿ, ನೈತಿಕತೆ, ಅನೈತಿಕತೆ ಇವುಗಳ ಬಗ್ಗೆ ಒಂದಷ್ಟು ವಾಸ್ತವಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಅನೇಕ ರಾಜಕಾರಣಿಗಳು ಅದರಲ್ಲೂ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಕೆಲವು ಉದ್ಯಮಿಗಳು, ಜನಪ್ರಿಯ ವ್ಯಕ್ತಿಗಳು, ನ್ಯಾಯಾಲಯಗಳಿಗೆ ಹೋಗಿ ತಮ್ಮ ವಿರುದ್ಧ ಮಾನಹಾನಿ ಸುದ್ದಿಗಳು ಮುಖ್ಯವಾಗಿ ಸೀಡಿಗಳು, ಪೆನ್ ಡ್ರೈವ್ ಗಳು ಅವರ ರಾಸಲೀಲೆಗಳು ಪ್ರಸಾರವಾಗದಂತೆ ತಡೆಯಾಜ್ಞೆ ತರುತ್ತಿದ್ದಾರೆ.
ಕೋರ್ಟ್ ಗಳು ಸಹ ಯಾವುದೋ ಆಧಾರದ ಮೇಲೆ ತಡೆಯಾಜ್ಞೆ ನೀಡುತ್ತಿವೆ. ಈಗಾಗಲೇ ಯಾರಾದರೂ, ಯಾರಿಗಾದರೂ, ಯಾವುದೇ ರೀತಿಯಲ್ಲಿ, ಮಾನಹಾನಿ ಉಂಟು ಮಾಡಿದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಅವಕಾಶ ಮತ್ತು ಕಾನೂನು ಇದೆ. ಅದರ ನಂತರವೂ ಈ ತಡೆಯಾಜ್ಞೆ ವಿಚಿತ್ರವೆನಿಸುತ್ತದೆ. ನಿರ್ದಿಷ್ಟ ಘಟನೆಗೆ ಅದು ಘಟಿಸುವ ಮುನ್ನವೇ, ಮಾನಹಾನಿಯಾಗುವ ಮೊದಲೇ ಅಥವಾ ಅದರ ಊಹೆ, ನಿರೀಕ್ಷೆಯಲ್ಲೇ, ವ್ಯಕ್ತಿಯೊಬ್ಬ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಜನಸಾಮಾನ್ಯರಿಗೆ ಅನುಮಾನ ಮೂಡಿಸುತ್ತದೆ……
ನ್ಯಾಯಾಲಯಗಳು ಸಹ ಈ ಅರ್ಜಿಗಳಿಗೆ, ಮನವಿಗಳಿಗೆ ತಡೆಯಾಜ್ಞೆ ನೀಡುವ ಮುನ್ನ, ದೂರುದಾರರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡುತ್ತಿದ್ದಾರೆ, ಅದು ಯಾವ ಸೀಡಿ ಇರಬಹುದು, ಆ ಸೀಡಿಯಲ್ಲಿ ಏನಿದೆ ಎನ್ನುವ ಭಯ ಇವರಿಗೆ ಕಾಡುತ್ತಿದೆ, ಆ ಸೀಡಿ ಯಾರ ಬಳಿ ಇರಬಹುದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂಬ ಷರತ್ತು ಹಾಗೂ ಸ್ಪಷ್ಟತೆ ಮತ್ತು ನ್ಯಾಯಾಲಯವು ಅದನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ ಶೀಘ್ರವೇ ತನಿಖೆಯನ್ನು ಆರಂಭಿಸಬೇಕು. ಕೇವಲ ಪ್ರಚಾರ ಮಾಡಬೇಡಿ ಎಂದು ತಡೆಯಾಜ್ಞೆ ನೀಡಿದ ಮಾತ್ರಕ್ಕೆ ಆ ಸೀಡಿಯ ಅಪರಾಧ ಹಾಗೆ ಮುಚ್ಚಿ ಹೋಗುತ್ತದೆ…..
ಒಂದು ವೇಳೆ ಯಾರಾದರೂ ಕೃತಕವಾಗಿ ನಮ್ಮ ಮೇಲೆ ತಂತ್ರಜ್ಞಾನದ ಸಹಾಯದಿಂದ ಅಶ್ಲೀಲ ದೃಶ್ಯಗಳನ್ನ ಚಿತ್ರಿಸಿದ್ದರೆ ಅದು ಸಹ ತನಿಖೆಯಾಗಲಿ ಆಗಲಿ ಮತ್ತು ವಾಸ್ತವ ಬಯಲಾಗಲಿ. ಅದನ್ನು ಹೊರತುಪಡಿಸಿ ಸುಮ್ಮನೆ ಯಾವುದೋ ಭಯದ ಆಧಾರದ ಮೇಲೆ ಘಟಿಸದ ಘಟನೆಗಳಿಗೆ ತಡೆಯಾಜ್ಞೆ ನೀಡುವುದು ವಿಚಿತ್ರವೆನಿಸುತ್ತದೆ. ಜೊತೆಗೆ ಕೆಲವು ರಾಜಕಾರಣಿಗಳು ದಾರಿ ತಪ್ಪುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ಎಂದಿನಂತೆ ಮಾಧ್ಯಮಗಳೇ ತನಿಖೆಯ ಜವಾಬ್ದಾರಿ ತೆಗೆದುಕೊಂಡಂತೆ ಅಪರಾಧಿ ಮತ್ತು ಅಪರಾಧವನ್ನು ಹೊರತುಪಡಿಸಿ, ರಾಜಕಾರಣಿಗಳ, ಅದಕ್ಕೆ ಸಂಬಂಧಪಟ್ಟವರ ಹೇಳಿಕೆಗಳನ್ನು ಪಡೆಯುತ್ತಾ ಇಡೀ ಘಟನೆಯನ್ನೇ ಗೊಂದಲಮಯಗೊಳಿಸಿ ದಾರಿ ತಪ್ಪಿಸುತ್ತಿದ್ದಾರೆ…..
ಕಾಮ ಪುರಾಣದ ಬಹುಮುಖ್ಯ ಅಂಶ ಮಹಿಳೆಯ ಘನತೆ, ಶೋಷಣೆ ಮತ್ತು ಕೀಚಕ ಮನೋಭಾವದ ವ್ಯಕ್ತಿಯ ನಡವಳಿಕೆ ಮತ್ತು ಆತನಿಗೆ ಶಿಕ್ಷೆ ಮುಖ್ಯವಾಗಿ ಚರ್ಚಿಸಬೇಕಿದೆ ಮತ್ತು ಮುಂದೆ ಈ ರೀತಿಯ ಘಟನೆಗಳಾಗದಂತೆ ತಡೆಯಬೇಕಿದೆ. ಅದನ್ನು ಹೊರತು ಪಡಿಸಿದ ಮಿಕ್ಕಿದ್ದೆಲ್ಲವೂ ಕೇವಲ ಬಾಯಿ ಚಪಲಗಳು ಮಾತ್ರವಾಗಿರುತ್ತದೆ….
ರಾಸಲೀಲೆಗಳ ಸುತ್ತವೇ ಸುತ್ತುತ್ತಿರುವ ಕರ್ನಾಟಕದ ಟಿವಿ ಮಾಧ್ಯಮ ಲೋಕ………..
ಅನೈತಿಕತೆಯನ್ನೇ ಒಂದು ಚರ್ಚೆಯಾಗಿಸಿ ಮನಸ್ಸುಗಳನ್ನು ಕಲುಷಿತ ಗೊಳಿಸಿದ ದೃಶ್ಯ ಮಾಧ್ಯಮಗಳು……
ಇದರಿಂದಾಗಿ,
ಮಾಧ್ಯಮಗಳಿಗೆ ಸಂಪೂರ್ಣ ಲಾಭ,
ರಾಜಕಾರಣಿಗಳಲ್ಲಿ ಕೆಲವರಿಗೆ ಲಾಭ, ಕೆಲವರಿಗೆ ನಷ್ಟ,
ಸಾಮಾನ್ಯ ಜನರಿಗೆ ಮಾತ್ರ ಸಂಪೂರ್ಣ ನಷ್ಟ……….
ಸುದ್ದಿಯ ಆದ್ಯತೆಗಳು ಹೇಗಿರಬೇಕು, ಸುದ್ದಿಯ ಪ್ರಸಾರದಿಂದ ಒಟ್ಟು ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳು ಏನು, ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಗಳೇನು ಎಂಬ ಸೂಕ್ಷ್ಮವಾದ ಅಧ್ಯಯನದ ಭಾಗಗಳು ಪತ್ರಕರ್ತರಿಗೆ ತಿಳಿದಿರಬೇಕಾದ ಮೂಲಭೂತ ವಿಷಯಗಳು…….
TRP ಹೆಚ್ಚಿಸುವುದು, ಜನಪ್ರಿಯತೆಯ ಹಿಂದೆ ಬೀಳುವುದು, ಅಸತ್ಯ, ಹಿಂಸೆ, ಕ್ರೌರ್ಯದ ದೃಶ್ಯಗಳನ್ನು ವಿಜೃಂಭಿಸುವುದು ಅನಾಗರಿಕ, ಅಮಾನವೀಯ ಪತ್ರಿಕಾ ಧರ್ಮದ ಲಕ್ಷಣಗಳು ಎಂಬುದನ್ನು ಮರೆತ ಪತ್ರಕರ್ತ ಗೆಳೆಯರು…..
ಒಂದು ಸಿನಿಮಾ ಬಿಡುಗಡೆಗೆ ಕೊಡುವ ಅತಿರೇಕದ ಪ್ರಚಾರದಲ್ಲಿ ಕೇವಲ ಹತ್ತು ಪರ್ಸೆಂಟ್ ಸಹ ರೈತರ ಶೋಷಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ ಮಾಧ್ಯಮ ಸ್ನೇಹಿತರು…….
ಯಾವುದೇ ಒಬ್ಬೇ ಒಬ್ಬ ಸಿನಿಮಾ ಹಿರೋ ಸಹ ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ( ವೈಯಕ್ತಿಕ ಸಣ್ಣ ಪುಟ್ಟ ಸಹಾಯ ಬಿಟ್ಟು ) ಆದರೆ ಆ ಕೃತಕ ಮನರಂಜನಾ ಉದ್ಯಮದ ನಟರನ್ನು ಹಾಡಿ ಹೊಗಳಿ ಅತಿಮಾನುಷ ವ್ಯಕ್ತಿಯಂತೆ ಚಿತ್ರಿಸುತ್ತಿರುವ ಅಭಿರುಚಿ ಹೀನ ದೃಶ್ಯ ಮಾಧ್ಯಮಗಳು…..
ಕೇವಲ ಸಮಾಜಕ್ಕೆ ಬಾಯಿಗೆ ಬಂದಂತೆ ನೈತಿಕ ಮೌಲ್ಯಗಳ ಬಗ್ಗೆ ಪಾಠ ಮಾಡುವುದಕ್ಕಿಂತ ಅವುಗಳು ಜನರಲ್ಲಿ ಅನುಷ್ಠಾನಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸುವುದು ಪತ್ರಕರ್ತರ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ….
ವಿಕೃತಗಳು ಮತ್ತು ವಿಕೃತ ಮನಸ್ಥಿತಿಯ ಜನರನ್ನೇ ಹೆಚ್ಚು ಜನಪ್ರಿಯ ಗೊಳಿಸುವ ಮೂಲಕ ಸಮಾಜದ ಒಟ್ಟು ಸ್ವಾಸ್ಥ್ಯವನ್ನೇ ಹಾಳು ಮಾಡಲು ಮುಂದಾಗಿರುವ ಮಾಧ್ಯಮಗಳು……..
ಎಲ್ಲಾ ಮಾಧ್ಯಮಗಳು ಸೇರಿ ರಚನಾತ್ಮಕ ಕಾರ್ಯತಂತ್ರ ರೂಪಿಸಿಕೊಳ್ಳದೇ ಕೇವಲ ಹಣ ಸಂಪಾದನೆಯೇ ಮುಖ್ಯ ಗುರಿಯಾಗಿ ಕಾರ್ಯನಿರ್ವಹಿಸಿದರೆ ಮುಂದಿನ ದೃಶ್ಯ ಮಾಧ್ಯಮಗಳ ಭವಿಷ್ಯ ಅತ್ಯಂತ ಕಳವಳಕಾರಿ ಎಂದು ಎಚ್ಚರಿಸುತ್ತಾ……….
ಅಸಹ್ಯ ಮಟ್ಟ ತಲುಪಿದ ಕರ್ನಾಟಕ ರಾಜಕೀಯದ ಎಲ್ಲಾ ಪಕ್ಷಗಳ ನಾಯಕರ ಭಾಷಾ ಪ್ರಯೋಗ….
ಭಾಷೆ ಎಂಬ ಭಾವ ಕಡಲಿಗೆ ಮತ್ತು ರಾಜಕೀಯ ಎಂಬ ಸೇವಾ ಮನೋಭಾವದ ಪಾವಿತ್ರ್ಯಕ್ಕೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು…..
ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ತಮ್ಮ ನಾಲಿಗೆಯ ಮೂಲಕ ಮತ್ತು ತಮ್ಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು……
ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು…….
ಅವರ ನಿಜ ಬಣ್ಣಗಳು – ಮನಸ್ಥಿತಿಗಳು – ವ್ಯಕ್ತಿತ್ವಗಳು – ಮುಖವಾಡಗಳು ಬೆತ್ತಲಾಗುತ್ತಿವೆ…….
ಅರ್ಥಮಾಡಿಕೊಳ್ಳಬೇಕಾಗಿರುವುದು ಸಾಮಾನ್ಯ ಜನರಾದ ನಾವು ಮಾತ್ರ…….
ಸ್ವಾತಂತ್ರ್ಯ ಬಂದು ಸುಮಾರು 79 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ದುರುಪಯೋಗದ ಪದ ಪ್ರಯೋಗ…….
ಭಾಷೆಯಲ್ಲಿ ಇದ್ದ ಕೆಟ್ಟ ಮತ್ತು ಒಳ್ಳೆಯ ಪದಗಳ ಅಂತರ ಇಲ್ಲವಾಗಿಸಿದ ಮಹತ್ಸಾಧನೆ ಇವರದು….
ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ನಮ್ಮ ಮಕ್ಕಳು ಇದರಿಂದ ಪ್ರಭಾವ ಹೊಂದಿ ಈ ರೀತಿಯ ಕೊಳಕು ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆ ಇದೆ..
ಕೆಲವು ಹಾಲಿ ಮತ್ತು ಮಾಜಿ ಶಾಸಕರು – ಮಂತ್ರಿಗಳು – ಮಾಜಿ ಮಂತ್ರಿಗಳು, ಮುಖ್ಯಮಂತ್ರಿಗಳು ಮುಂತಾದವರಿಂದ ಸಾರ್ವಜನಿಕವಾಗಿ ಅತ್ಯಂತ ಕೆಟ್ಟ ಭಾಷಾ ಪ್ರಯೋಗ. ಅದಕ್ಕೆ ಮತ್ತಷ್ಟು ಹುಚ್ಚು ನಾಯಕರಿಂದ ಇನ್ನೊಂದಿಷ್ಟು ಹುಚ್ಚು ಮಾತುಗಳ ವಿರೋಧ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಕೆಳಮಟ್ಟದ ಕೆಟ್ಟ ಭಾಷಾ ಪ್ರಯೋಗದ ಪ್ರತಿಕ್ರಿಯೆ, ಅದನ್ನು ಮಾಧ್ಯಮಗಳು ಜನರಿಗೆ ಮತ್ತಷ್ಟು ಸ್ಪಷ್ಟವಾಗಿ ಅರ್ಥಮಾಡಿಸಲು ಹತ್ತಾರು ಸಲ ಮತ್ತೆ ಮತ್ತೆ ಪ್ರಸಾರ……….
ನಾವು ಚಿಕ್ಕ ವಯಸ್ಸಿನಿಂದ ಕಲಿತುಕೊಂಡು ಬಂದಿದ್ದ ಭಾಷಾ ಸಂಸ್ಕಾರದ ಸಭ್ಯತೆ, ಸಂಯಮ ತಟ್ಟನೆ ಮಾಯಾ………
ಹುಚ್ಚು ಹಿಡಿದಂತೆ ಕೂಗಾಟ, ಹಾರಾಟ, ಚೀರಾಟಗಳೇ ಮಾಧ್ಯಮ ಲೋಕದ ಹೊಸ ಆಕರ್ಷಕ ಭಾಷೆ………
ದಮ್ಮು ತಾಖತ್ತು, ಗಂಡಸು, ಪಿಂಪ್ – ವೇಶ್ಯೆ – ತಲೆ ಹಿಡುಕ – ಕಚ್ಚೆ ಹರುಕ – ಕೊಲೆಗಡುಕ – ನಾಲಿಗೆ ಕತ್ತರಿಸುತ್ತೇನೆ – ತಲವಾರು ಹಿಡಿಯುತ್ತೇನೆ… ಹೀಗೆ ಸಾಗುತ್ತದೆ ಅವರ ಭಾಷೆ…..
ಹುಚ್ಚು ನಾಯಿ ಬೊಗಳಿದರೆ ಸಾವಿರಾರು ನಾಯಿಗಳು ಅದಕ್ಕಿಂತಲೂ ಜೋರಾಗಿ ಬೊಗಳುವ ಹೊಸ ವ್ಯವಸ್ಥೆಯಲ್ಲಿ ನಾವಿದ್ದೇವೆ…..
ಹುಚ್ಚು ನಾಯಿಗೆ ಮಹತ್ವ ಕೊಡಬೇಕೋ ಅಥವಾ ಕೋಗಿಲೆಯ ಕುಹೂ ಕುಹೂ ಗಾನಕ್ಕೋ ಎಂಬ ಸೂಕ್ಷ್ಮತೆ ಸಹ ಈಗ ಜನರಲ್ಲೂ ಉಳಿದಿಲ್ಲ………..
ಸಂಜೆಯ ಚರ್ಚಾ ಕಾರ್ಯಕ್ರಮಕ್ಕೆ ಹುಚ್ವು ನಾಯಿಯೇ ಆಹಾರ. ಕೋಗಿಲೆಯ ಧ್ವನಿ ಕರ್ಕಶ…….
ಅಗೋ ಅಲ್ಲಿ ನೋಡಿ………,
ನಿಮ್ಮ ಪಕ್ಕದಲ್ಲೇ ಆ ಎಳೆಯ ಕಂದ ತಾಯಿಯ ಎದೆ ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನೂ, ಟಿವಿಯನ್ನು ನೋಡುತ್ತಿದೆ. ಅದಕ್ಕಿನ್ನೂ ಮಾತು ಬರುತ್ತಿಲ್ಲ. ಅದಕ್ಕೆ ಯಾವ ಭಾಷೆ ಕಲಿಸುತ್ತೀರಿ……….
ಒಂದು ಮಾತನ್ನು ಸ್ಪಷ್ಟವಾಗಿ ನೆನೆಪಿಡಿ………
ಯಾರದೇ ಆಗಲಿ
” ಬೈಗುಳದ ಭಾಷೆ ಆಡುವವನ ಯೋಗ್ಯತೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಅನಿಸಿಕೊಂಡವನ ಯೋಗ್ಯತೆಯನ್ನಲ್ಲ.”……..
ಸೂಳೆ ಎಂಬ ತಾಯ್ತನದ ಹೆಣ್ಣು ತನ್ನ ಅನಿವಾರ್ಯತೆಗೆ ತನ್ನ ದೇಹವನ್ನು ದುಡಿಸಿಕೊಂಡು ಜೀವಿಸಬಹುದು. ಅದು ಸೃಷ್ಠಿಯ ಮೂಲದಿಂದ ಆಕೆಯ ಸ್ವಾತಂತ್ರ್ಯವೂ ಹೌದು………,
ಆದರೆ ಇದೇ ಸಮಾಜದಲ್ಲಿ ಬೇರೆಯವರ ದೇಹವನ್ನು ತನ್ನ ಸುಖಕ್ಕಾಗಿ ಅಡವಿಟ್ಟು ಜೀವಿಸುತ್ತಿರುವ ಕಿರಾತಕರು ನಮ್ಮ ನಡುವೆಯೇ ಇದ್ದಾರೆ ಮತ್ತು ನಮ್ಮಿಂದಲೇ ಗೌರವವನ್ನೂ ಪಡೆಯುತ್ತಿದ್ದಾರೆ……..
ಆದ್ದರಿಂದ ಹುಚ್ಚು ನಾಯಿಗಳು ಬೊಗಳುವುದನ್ನು ತಡೆಯುವ ಸಾಮರ್ಥ್ಯ ಸದ್ಯ ನಮಗಿಲ್ಲ. ಅದನ್ನು ನಾಶ ಮಾಡಲೂ ಈ ಕ್ಷಣಕ್ಕೆ ಸಾಮಾನ್ಯರಾದ ನಮಗೆ ಆಗುವುದಿಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಹುಚ್ಚು ಹಿಡಿದಂತೆ ಆಡುತ್ತಿದೆ……….
ಆದರೆ ನಾಗರಿಕ ಪ್ರಜ್ಞೆಯ ಸಭ್ಯತೆ, ಸಂಯಮ ನಮ್ಮಲ್ಲಿ ಅಳವಡಿಸಿಕೊಂಡರೆ ಸಾಕು, ಅದೇ ಹುಚ್ಚು ನಾಯಿ ಕಚ್ಚುವುದಕ್ಕೆ ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಯ ರೇಬೀಸ್ ಚುಚ್ಚುಮದ್ದಿನ ಚಿಕಿತ್ಸೆ……
ಅದರಿಂದ ನಾವು ಸುರಕ್ಷಿತವಾಗುತ್ತೇವೆ.
ಹುಚ್ಚು ನಾಯಿ ದೀರ್ಘಕಾಲ ಬದುಕದೇ ತನ್ನಿಂದ ತಾನೇ ಸಾಯುತ್ತದೆ…….
ಇಲ್ಲದಿದ್ದರೆ ಹುಚ್ಚು ನಾಯಿಗಳು ಕಚ್ಚಿ ಒಂದು ಇಡೀ ಸಮಾಜ ಹುಚ್ಚುಚ್ಚಾಗಿ ಆಡುತ್ತದೆ. ಮುಂದಿನ ಜನಾಂಗ ಸಂಪೂರ್ಣ ಹುಚ್ಚರಾಗುತ್ತಾರೆ……
ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…..
ಏಕೆಂದರೆ,
ವೇಶ್ಯಾವಾಟಿಕೆ ವೃತ್ತಿಯನ್ನು ಅತ್ಯಂತ ಹೇಯ – ತುಚ್ಚ – ಕೆಟ್ಟದ್ದು – ಹೀನಾಯ
ಎಂದು ಭಾರತೀಯ ಸಮಾಜ ಪರಿಗಣಿಸುತ್ತದೆ…………
ಮುಖ್ಯವಾಗಿ,
ಹಣಕ್ಕಾಗಿ ತನ್ನ ದೇಹವನ್ನು ಇನ್ನೊಬ್ಬರ ಬೇಡಿಕೆ ಪೂರೈಸಲು ಉಪಯೋಗಿಸುವ ಕೆಲಸಕ್ಕೆ ವೇಶ್ಯಾ ವೃತ್ತಿ ಎನ್ನಲಾಗುತ್ತದೆ. ಬಹುತೇಕ, ಹೆಣ್ಣು ಈ ವೃತ್ತಿಯ ಬಲಿಪಶುವಾದರೆ ಅಲ್ಪ ಪ್ರಮಾಣದಲ್ಲಿ ಪುರುಷ ವೇಶ್ಯಾ ವೃತ್ತಿ ಸಹ ಈ ಸಮಾಜದಲ್ಲಿ ಅಸ್ತಿತ್ವದಲ್ಲಿದೆ.
ಇಲ್ಲಿ ಹೆಣ್ಣು ತನ್ನ ಸ್ವಂತ ದೇಹವನ್ನು ಅನಿವಾರ್ಯವೋ, ಅವಶ್ಯಕವೋ, ಪರಿಸ್ಥಿತಿಯ ಒತ್ತಡವೋ, ಕಾರಣವೇನೆ ಇರಲಿ ದುಡಿಸಿಕೊಂಡು ಹಣ ಮಾಡುತ್ತಾಳೆ. ಇತರರಿಗೆ ಅದರಿಂದ ತೊಂದರೆ ಏನೂ ಇರುವುದಿಲ್ಲ.
ನನ್ನ ಈ ಲೇಖನ ಖಂಡಿತ ವೇಶ್ಯಾ ವೃತ್ತಿಯ ಬಗ್ಗೆ ಅಲ್ಲ. ಇದು ಕೇವಲ ಪೀಠಿಕೆ ಮಾತ್ರ. ವೇಶ್ಯಾ ವೃತ್ತಿ ಸರಿ ಅಥವಾ ತಪ್ಪು ಅಥವಾ ಅದಕ್ಕೆ ಯಾರು ಹೊಣೆ ಎಂಬ ವಿಮರ್ಶೆ ಇಲ್ಲಿ ಮಾಡುವುದಿಲ್ಲ. ಅದು ಪ್ರತ್ಯೇಕ ವಿಷಯ.
ಈ ಲೇಖನದ ಉದ್ದೇಶ ಆಧ್ಯಾತ್ಮದ ತವರೂರು ಭಾರತದಲ್ಲಿ ಜನ ಸಾಮಾನ್ಯರ ಭಾವನೆಯ ವೇಶ್ಯಾ ವೃತ್ತಿಗಿಂತ ಹತ್ತು ಪಟ್ಟು ಅತ್ಯಂತ ನೀಚ ವೃತ್ತಿ ದ್ರೋಹ ಮಾಡುವ ಜನರ ಬಗ್ಗೆ ಹೇಳಬೇಕಾಗಿದೆ.
ಮುಖ್ಯ ವಿಷಯಕ್ಕಿಂತ ಮೊದಲು ಕೆಲವು ಸಣ್ಣ ಉದಾಹರಣೆ ಕೊಡುತ್ತೇನೆ.
ಸರ್ಕಾರದ ಸಂಬಳ ಪಡೆಯುವ ಅಧಿಕಾರಿ ತನ್ನ ಅಧಿಕೃತ ಕರ್ತವ್ಯ ನಿರ್ವಹಿಸಲು ಲಂಚ ಪಡೆದಾಗ,
ಒಬ್ಬ ವೈದ್ಯ ಹಣದ ಕಾರಣಕ್ಕಾಗಿ ರೋಗಿಯನ್ನು ಶೋಷಿಸಿದಾಗ,
ಒಬ್ಬ ನ್ಯಾಯಾಧೀಶ ಹಣದ ಕಾರಣಕ್ಕಾಗಿ ಅನ್ಯಾಯದ ಪರ ತೀರ್ಪು ನೀಡಿದಾಗ,
ಒಬ್ಬ ಶಿಕ್ಷಕ ಹಣದ ಕಾರಣಕ್ಕಾಗಿ ವಿದ್ಯಾರ್ಥಿಗಳ ದಾರಿ ತಪ್ಪಿಸಿದಾಗ,
ಒಬ್ಬ ಪತ್ರಕರ್ತ ರೋಲ್ ಕಾಲ್ ಗಿರಾಕಿಯಾದಾಗ,
ಒಬ್ಬ ವ್ಯಕ್ತಿ ಹಣಕ್ಕಾಗಿ ಕೊಲೆ ದರೋಡೆ ವಂಚನೆ ಮಾಡಿದಾಗ,
ಕಾಮಕ್ಕಾಗಿ ಅತ್ಯಾಚಾರ ಮಾಡಿದಾಗ,…..
ಹೀಗೆ ಇನ್ನೂ ಹಲವಾರು ಕೆಲಸಗಳಲ್ಲಿ ಆತ ತನ್ನ ಇಡೀ ವ್ಯಕ್ತಿತ್ವವನ್ನೇ ಮಾರಿಕೊಂಡಿರುತ್ತಾನೆ. ತನ್ನ ಕರ್ತವ್ಯ, ವೃತ್ತಿ ಧರ್ಮ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ, ನೈತಿಕ ಮೌಲ್ಯ ಮತ್ತು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿರುತ್ತಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೇಶ್ಯೆ ತನ್ನ ದೇಹವನ್ನು ಸ್ವ ಇಚ್ಛೆಯಿಂದ ದಂಡಿಸಿದರೆ, ಈ ಕಿರಾತಕರು ತಮ್ಮ ಸುಖಕ್ಕಾಗಿ ಇತರರ ದೇಹ ಮತ್ತು ಬದುಕನ್ನೇ ದಂಡಿಸುತ್ತಾರೆ.
ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.
ಭಾರತದ ಆತ್ಮ ಅಡಗಿರುವುದು ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ. ನಾವೆಲ್ಲರೂ ಅದರ ಪಾಲುದಾರರು.
ಸುಮಾರು 110 ಕೋಟಿ ಮತದಾರರು ಇರುವ ಈ ದೇಶದಲ್ಲಿ, ವಿಶ್ವದ ಏಳನೇ ಬಹುದೊಡ್ಡ ವಿಸ್ತೀರ್ಣ ಇರುವ ಈ ರಾಷ್ಟ್ರದಲ್ಲಿ, ಇಡೀ ದೇಶದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ನಿರ್ವಹಿಸಲು ಚುನಾವಣೆ ಎಂಬ ಮಾರ್ಗದ ಮೂಲಕ ಕೆಲವು ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತೇವೆ. ಅವರಿಗೆ ಅಧಿಕಾರ ಹಣ ಸೇರಿದಂತೆ ವಿಐಪಿ ಎಂದು ಪರಿಗಣಿಸಿ ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ ಎಂಎಲ್ಎ ಮತ್ತು ಎಂಪಿಗಳು.
ಇವರನ್ನು ಸಂವಿಧಾನದ ಅಡಿಯಲ್ಲಿ ಒಬ್ಬ ಪ್ರತಿನಿಧಿಯಾಗಿ ಜನರ ಸೇವೆಗಾಗಿ ಆಯ್ಕೆ ಮಾಡಲಾಗಿರುತ್ತದೆ. ಕೆಲವರನ್ನು ಆಡಳಿತ ಪಕ್ಷದವರೆಂದು ಮತ್ತೆ ಕೆಲವರನ್ನು ವಿರೋಧ ಪಕ್ಷದವರೆಂದು ಕರೆಯಲಾಗುತ್ತದೆ. ಆದರೆ ಅವರ ಕೆಲಸ ಮಾತ್ರ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರಬೇಕಾಗುತ್ತದೆ. ಈ ನಡುವೆ ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಮತ್ತು ಮುಖ್ಯ ಅಧಿಕಾರಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತದೆ.
ಆದರೆ ಈಗಿನ ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ಜನ ಪ್ರತಿನಿಧಿಗಳ ವರ್ತನೆ ಮೇಲೆ ಹೇಳಿದ ಎಲ್ಲಾ ವೃತ್ತಿಗಳಿಗಿಂತಲೂ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ.
ಇದನ್ನು ನಾನು ನೈತಿಕವಾಗಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಹಿನ್ನೆಲೆಯಲ್ಲಿ ಹಾಗೂ ಜನರ ಜೀವನ ಮಟ್ಟದ ಆಧಾರದಲ್ಲಿ ಖಂಡಿತ ದೃಢಪಡಿಸಬಲ್ಲೆ.
ಎಷ್ಟೊಂದು ಜಲ್ವಂತ ಸಮಸ್ಯೆಗಳ ಮಧ್ಯೆ, 224 ಶಾಸಕರಲ್ಲಿ ಕನಿಷ್ಠ ಮಟ್ಟದ ಹೊಂದಾಣಿಕೆಯೂ ಇಲ್ಲದೆ, ತಿಂಗಳಾನುಗಟ್ಟಲೆ ಆಡಳಿತವನ್ನು ನಿರ್ಲಕ್ಷಿಸಿ, ಸುಮಾರು 7 ಕೋಟಿ ಜನ ಮತ್ತು ಇಲ್ಲಿನ ಒಟ್ಟು ಸಂಪನ್ಮೂಲಗಳನ್ನು ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವ, ಇವರನ್ನು ಏನೆಂದು ಕರೆಯುವುದು.
ಕರ್ನಾಟಕದ ಸಂಪತ್ತು ಮತ್ತು ಜನ ಇವರ ಸ್ವಂತ ಆಸ್ತಿಯೇ. ಏನೋ ಬೃಹತ್ ರಾಜ್ಯದ ಕೋಟ್ಯಾಂತರ ಮತದಾರನ ಆಯ್ಕೆಯಲ್ಲಿ ಒಂದಷ್ಟು ಏಕಾಭಿಪ್ರಾಯ ಮೂಡದೆ 3 ಪಕ್ಷಗಳಲ್ಲಿ ಒಂದಷ್ಟು ಜನಪ್ರತಿನಿಧಿಗಳು ಹಂಚಿ ಹೋಗಿರಬಹುದು. ಆದರೆ ಈ 224 ಜನರಲ್ಲಿ ಹೊಂದಾಣಿಕೆ ಮೂಡದಿದ್ದರೆ ಹೇಗೆ ? ಯಾರೊಬ್ಬರೂ 7 ಕೋಟಿ ಜನರ ಹಿತಾಸಕ್ತಿಯ ದೃಷ್ಟಿಯಿಂದ ಸ್ವಲ್ಪವೂ ತ್ಯಾಗಕ್ಕೆ ಸಿದ್ದರಿಲ್ಲವೇ ? ಅಷ್ಟೊಂದು ಸ್ವಾರ್ಥಿಗಳೇ ಅವರು ?
ಈಗಿನ ಸಂದರ್ಭದಲ್ಲಿ 224 ಜನರಲ್ಲಿ ಒಬ್ಬರು ಮುಖ್ಯಮಂತ್ರಿಯಾಗಿ, 38 ಜನ ಮಂತ್ರಿಗಳಾಗಿ ಉಳಿದವರು ತಮ್ಮ ಕ್ಷೇತ್ರಗಳನ್ನೇ ಮುಖ್ಯ ಗುರಿಯಾಗಿಸಿಕೊಂಡು ಅಭಿವೃದ್ಧಿ ಪಡಿಸುತ್ತಾ ಉಳಿದ ಅವಧಿ ಮುಗಿಸಿದರೇ ಭೂಮಿ ಪ್ರಳಯವಾಗುವುದೇ ? ಅವರ ವಂಶ ಹಾಳಾಗುವುದೇ ?
ಯಾವ ಪಕ್ಷವಾದರೆ ನಮಗೇನು. ಪಕ್ಷ ಒಂದು ನಿರ್ಜೀವ ಹೆಸರು ಮತ್ತು ಸಿದ್ದಾಂತ ಗುರುತಿಸುವಿಕೆ ಮಾತ್ರ. ವ್ಯಕ್ತಿ ಮತ್ತು ಜನ ಪ್ರತಿನಿಧಿ
ಪರಿಸ್ಥಿತಿಗೆ ತಕ್ಕಂತೆ ಸ್ಪಂದಿಸಬಹುದು. ನಾಡಿಗೆ ಮತ್ತು ಇಲ್ಲಿನ ಜನರಿಗೆ ಒಳ್ಳೆಯದಾದರೆ ಸಾಕು.
ವ್ಯಕ್ತಿಗಳು ಮುಖ್ಯವಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನಿನಂತೆ ಆಯ್ಕೆಯಾಗಿರುವ ಯಾವೊನಾದರೂ ನಮಗೇನು. ಅಧಿಕಾರಿಗಳಿದ್ದಾರೆ, ನ್ಯಾಯಾಂಗವಿದೆ, ಮಾಧ್ಯಮವಿದೆ, ಇನ್ನೇನು ಬೇಕು. ಯಾವ ಜಾತಿಯವನಾದರೂ ನಮಗೇನು ?
ಇದೇನು ಮಕ್ಕಳ ಜೂಟಾಟವೇ, ನಾವೇನು ನೆಮ್ಮದಿಯಿಂದ ಬದುಕುವುದು ಮತ್ತು ಏನನ್ನಾದರೂ ಸಾಧಿಸುವುದು, ಅನುಭವಿಸುವುದು ಬೇಡವೇ…….
ಇಡೀ ಪ್ರಹಸನವನ್ನು ನಿರ್ಲಕ್ಷಿಸಿ ಜನರನ್ನು ಜಾಗೃತಿಗೊಳಿಸಲು ಮತ್ತು ಸಮಸ್ಯೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ಮಾಧ್ಯಮಗಳಿಗೆ ಇದು ಅತ್ಯುತ್ತಮ ಅವಕಾಶ. ಆದರೆ ಅವು ಈ ಕಿತ್ತಾಟವನ್ನು ಹಬ್ಬದಂತೆ ಸಂಭ್ರಮಿಸುತ್ತಿರುವುದನ್ನು ನೋಡಿದರೆ ವಿಷಾದವಾಗುತ್ತದೆ.
ಏನನ್ನಾದರೂ ಮಾಡಲೇ ಬೇಕು. ಆದರೆ ಸಾಮಾನ್ಯರಾದ ನಾವು ಮಾಡಬಹುದಾದದ್ದು ಏನು ? ಎಲ್ಲಿ ? ಹೇಗೆ ? ಯಾವಾಗ ? ಎಂದು ಯೋಚಿಸುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ